ADVERTISEMENT

ರೌಡಿ ಲಕ್ಷ್ಮಣನ ಕೊಲೆ ಹಿಂದೆ ಹೆಣ್ಣಿನ ನೆರಳು?

ಹತ್ಯೆ ಪ್ರಕರಣ ಸಿಸಿಬಿಗೆ ವರ್ಗ * ಕೃತ್ಯಕ್ಕೆ ಬಳಸಿದ್ದು ರೌಡಿ ಹೇಮಂತ್‌ನ ಕಾರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 20:05 IST
Last Updated 8 ಮಾರ್ಚ್ 2019, 20:05 IST
ಲಕ್ಷ್ಮಣ
ಲಕ್ಷ್ಮಣ   

ಬೆಂಗಳೂರು: ಮಹಾಲಕ್ಷ್ಮಿಲೇಔಟ್‌ನಲ್ಲಿ ಗುರುವಾರ ನಡೆದಿದ್ದ ರೌಡಿ ಲಕ್ಷ್ಮಣನ ಕೊಲೆ ಪ್ರಕರಣದ ತನಿಖೆ ಸಿಸಿಬಿಗೆ ವರ್ಗವಾಗಿದ್ದು, ಯುವತಿಯ ವಿಚಾರಕ್ಕೇ ಆತನನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಕೃತ್ಯಕ್ಕೆ ಬಳಸಿರುವ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರು, ಬ್ಯಾಡರಹಳ್ಳಿ ಠಾಣೆ ರೌಡಿಶೀಟರ್ ಹೇಮಂತ್ ಅಲಿಯಾಸ್ ಹೇಮಿಗೆ ಸೇರಿದ್ದು ಎನ್ನಲಾಗಿದೆ. ಆತನ ಪ್ರೇಯಸಿಯ ಜತೆಗೆ ಲಕ್ಷ್ಮಣ್ ಇತ್ತೀಚೆಗೆ ಸ್ನೇಹ ಬೆಳೆಸಿಕೊಂಡಿದ್ದ. ಇದೇ ವಿಷಯವಾಗಿ ಅವರಿಬ್ಬರ ನಡುವೆ ದ್ವೇಷ ಬೆಳೆದಿತ್ತು. ಈ ಹಗೆತನವೂ ಕೊಲೆಗೆ ಒಂದು ಕಾರಣವಿರಬಹುದು ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಹಲವು ಮಹಿಳೆಯರೊಂದಿಗೆ ಸಲುಗೆ ಹೊಂದಿದ್ದ ಲಕ್ಷ್ಮಣ, ಗುರುವಾರ ಬೆಳಿಗ್ಗೆ 11.30ರ ಸುಮಾರಿಗೆ ತುಮಕೂರು ರಸ್ತೆಯ ಆರ್.ಜಿ.ಲಾಡ್ಜ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದ. ಅಲ್ಲಿಂದ ವಾಪಸ್ ಬರುತ್ತಿದ್ದಾಗಲೇ ಆತನ ಹತ್ಯೆ ನಡೆದಿದೆ. ಹಂತಕರು ಲಕ್ಷ್ಮಣನಿಗೆ ಗೊತ್ತಿರುವ ಮಹಿಳೆಯನ್ನೇ ಬಳಸಿಕೊಂಡು ಕೃತ್ಯ ಎಸಗಿರಬಹುದು ಎಂಬ ಸಂಶಯವಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘2005ರಲ್ಲಿ ಲಕ್ಷ್ಮಣನ ಗ್ಯಾಂಗ್ ರೌಡಿ ಮಂಜುನಾಥ ಅಲಿಯಾಸ್ ಮಚ್ಚನನ್ನು ಕೊಲೆ ಮಾಡಿತ್ತು. ಆತನ ಶಿಷ್ಯ ಪಾಪರೆಡ್ಡಿಪಾಳ್ಯದ ಶ್ರೀಕಂಠ ಹಾಗೂ ಬ್ಯಾಟರಾಯನಪುರದ ರೌಡಿಶೀಟರ್ ಕೃಷ್ಣಮೂರ್ತಿ ಅಲಿಯಾಸ್ ಕುರಿ ಕೃಷ್ಣನ ಸಹಚರರೂ ಹೇಮಂತ್‌ಗೆ ಸಾಥ್ ನೀಡಿರಬಹುದು. ಹಲವು ರೌಡಿಗಳು ಒಟ್ಟಾಗಿ ಈ ಕೆಲಸ ಮಾಡಿರುವ ಕಾರಣ ಕಮಿಷನರ್ ತನಿಖೆಯನ್ನು ಶುಕ್ರವಾರ ಸಿಸಿಬಿಗೆ ವರ್ಗಾಯಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ ಕುಮಾರ್ ಅವರು ಬೆಳಿಗ್ಗೆ ಕೃತ್ಯ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಗುರುತಿನ ಚೀಟಿ ಕೇಳಿದ್ದರು

ಲಕ್ಷ್ಮಣ ಬುಧವಾರವೇ ತನ್ನ ಕಾರು ಚಾಲಕನ ಹೆಸರಿನಲ್ಲಿ ಆರ್‌.ಜಿ.ಲಾಡ್ಜ್‌ನಲ್ಲಿ ಕೊಠಡಿ ಕಾಯ್ದಿರಿಸಲು ಮುಂದಾಗಿದ್ದ. ಆದರೆ, ಲಾಡ್ಜ್‌ ನೌಕರರು ಗುರುತಿನ ಚೀಟಿ ಕೇಳಿದ್ದರು. ಚಾಲಕನ ಗುರುತಿನ ಚೀಟಿ ತನ್ನ ಬಳಿ ಇರದ ಕಾರಣ ವಾಪಸಾಗಿದ್ದ ಲಕ್ಷ್ಮಣ, ಮರುದಿನ ಬೆಳಿಗ್ಗೆ ಹೋಗಿ ತನ್ನ ಹೆಸರಿನಲ್ಲೇ ಕೊಠಡಿ ಕಾಯ್ದಿರಿಸಿದ್ದ. ಲಾಡ್ಜ್‌ನ ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಈ ದೃಶ್ಯಾವಳಿ ಸೆರೆಯಾಗಿವೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.