ADVERTISEMENT

ಬೆಂಗಳೂರು | ರೌಡಿ ಹತ್ಯೆ: ವಿಲ್ಸನ್ ಗಾರ್ಡನ್ ನಾಗ ಶರಣು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 16:21 IST
Last Updated 18 ಆಗಸ್ಟ್ 2023, 16:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ಮಹೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

‘ಸಿದ್ದಾಪುರ ಠಾಣೆಯ ರೌಡಿ ಪಟ್ಟಿಯಲ್ಲಿ ಹೆಸರಿದ್ದ ಮಹೇಶ್‌ನನ್ನು ಆಗಸ್ಟ್ 4ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಮುಖ ಆರೋಪಿಯಾಗಿದ್ದ ರೌಡಿ ವಿಲ್ಸನ್‌ ಗಾರ್ಡನ್ ನಾಗ್ ಹಾಗೂ ಮೋಹನ್ ಅಲಿಯಾಸ್ ಡಬಲ್ ಮೀಟರ್ ತಲೆಮರೆಸಿಕೊಂಡಿದ್ದರು. ಇದೀಗ ಇಬ್ಬರೂ ನ್ಯಾಯಾಲಯಕ್ಕೆ ಶರಣಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಇಬ್ಬರನ್ನೂ ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ಸಂಬಂಧ ಇಬ್ಬರನ್ನೂ ವಿಚಾರಣೆ ನಡೆಸಬೇಕಿದ್ದು, ಕಸ್ಟಡಿಗೆ ನೀಡುವಂತೆ ಮನವಿ ಸಲ್ಲಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಗಡಿಯಲ್ಲಿ ಸಿಕ್ಕಿಬಿದ್ದಿದ್ದ ಆರೋಪಿಗಳು: ‘ಹತ್ಯೆ ಬಳಿಕ ಪರಾರಿಯಾಗಿದ್ದ ಸಿದ್ದಾಪುರ ಸುನೀಲ್,‌ ಕಣ್ಣನ್, ಪ್ರದೀಪ್, ಮನು, ಶ್ರೀನಿವಾಸ್ ಅಲಿಯಾಸ್​​​ ಪಾಪ ಸೇರಿ 14 ಆರೋಪಿಗಳು ತಮಿಳುನಾಡಿನ ಗಡಿಯಲ್ಲಿದ್ದರು. ಪ್ರಕರಣ ದಾಖಲಾದ ಕೆಲ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಬಂಧಿಸಲಾಗಿತ್ತು’ ಎಂದು ಮೂಲಗಳು ಹೇಳಿವೆ.

‘ನಾಗ ಹಾಗೂ ಮೋಹನ್ ತಲೆಮರೆಸಿಕೊಂಡು ಸುತ್ತಾಡುತ್ತಿದ್ದರು. ಇವರು ಎಲ್ಲಿದ್ದರು ? ಎಂಬ ಮಾಹಿತಿ ಸಿಕ್ಕಿರಲಿಲ್ಲ. ಇದೀಗ ಇಬ್ಬರೂ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಶರಣಾಗಿದ್ದಾರೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.