ADVERTISEMENT

ಬೆಳ್ಳಂಬೆಳಗ್ಗೆ ರೌಡಿ ಮನೆಗಳ ಮೇಲೆ ದಾಳಿ

ಪಶ್ಚಿಮ ವಿಭಾಗದ ಪೊಲೀಸರ ಕಾರ್ಯಾಚರಣೆ * 150ಕ್ಕೂ ಹೆಚ್ಚು ಮಂದಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 19:45 IST
Last Updated 10 ಮಾರ್ಚ್ 2019, 19:45 IST
ಹಾಸಿಗೆಯಲ್ಲೇ ರೌಡಿಯೊಬ್ಬನನ್ನು ಪೊಲೀಸರು ವಿಚಾರಣೆ ನಡೆಸಿದರು
ಹಾಸಿಗೆಯಲ್ಲೇ ರೌಡಿಯೊಬ್ಬನನ್ನು ಪೊಲೀಸರು ವಿಚಾರಣೆ ನಡೆಸಿದರು   

ಬೆಂಗಳೂರು: ಪಶ್ಚಿಮ ವಿಭಾಗದ ಹಲವು ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ರೌಡಿಗಳ ಮನೆಗಳ ಮೇಲೆ ಭಾನುವಾರ ನಸುಕಿನಲ್ಲಿ ದಿಢೀರ್ ದಾಳಿ ಮಾಡಿದ ಪೊಲೀಸರು, 150ಕ್ಕೂ ಹೆಚ್ಚು ರೌಡಿಗಳನ್ನು ವಶಕ್ಕೆ ಪಡೆದರು.

ಇತ್ತೀಚೆಗಷ್ಟೇ ನಗರದಲ್ಲಿ ರೌಡಿ ಲಕ್ಷ್ಮಣನ ಹತ್ಯೆಯಾಗಿದ್ದು, ರೌಡಿ ಚಟುವಟಿಕೆಗಳು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ರೌಡಿಗಳ ಮೇಲೆ ನಿಗಾ ಇರಿಸುವಂತೆ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್‌, ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.

ಅದರನ್ವಯ ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ ನೇತೃತ್ವದಲ್ಲಿ ಪೊಲೀಸರು, ನಸುಕಿನ 3 ಗಂಟೆಯಿಂದ 6 ಗಂಟೆವರೆಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ADVERTISEMENT

ನಿದ್ದೆಯ ಮಂಪರಿನಲ್ಲಿದ್ದ ರೌಡಿಗಳನ್ನುಹಾಸಿಗೆಯಲ್ಲೇ ವಿಚಾರಣೆಗೆ ಒಳಪಡಿಸಿದರು. ಮಾರಕಾಸ್ತ್ರ ಹಾಗೂ ಶಸ್ತ್ರಾಸ್ತ್ರ ಬಚ್ಚಿಟ್ಟಿರಬಹುದೆಂಬ ಅನುಮಾನದಡಿ ಮನೆಯಲ್ಲೆಲ್ಲ ಹುಡುಕಾಟ ನಡೆಸಿದರು. ರಾಜರಾಜೇಶ್ವರಿನಗರ, ವಿಜಯನಗರ, ಕಾಮಾಕ್ಷಿಪಾಳ್ಯ ಠಾಣೆ ಆವರಣದಲ್ಲಿ ಪರೇಡ್ ನಡೆಸಿ ಮುಂಜಾಗ್ರತಾ ಕ್ರಮವಾಗಿ 150ಕ್ಕೂ ಹೆಚ್ಚು ರೌಡಿಗಳನ್ನು ವಶಕ್ಕೆ ಪಡೆದರು.

ರೌಡಿಗಳಾದ ಭರತ್ ಅಲಿಯಾಸ್ ಶ್ರೀರಾಮಪುರ, ಸಂತೋಷ್ ಅಲಿಯಾಸ್ ಗಾಂಧಿ, ಅರುಣ ಅಲಿಯಾಸ್ ಹಳ್ಳಿ, ದಿಲೀಪ್ ಅಲಿಯಾಸ್ ಪಂ‍ಪು ಸೇರಿದಂತೆ ಹಲವು ರೌಡಿಗಳ ಮನೆಗಳ ಮೇಲೆ ಈ ದಾಳಿ ನಡೆಯಿತು.

ಚಾಕು, ದೊಣ್ಣೆ ಜಪ್ತಿ: ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ಏಳು ಮಂದಿಯನ್ನು ಬಂಧಿಸಿರುವ ಪೊಲೀಸರು, ಅವರ ಬಳಿಯ ಚಾಕು ಹಾಗೂ ಮರದ ದೊಣ್ಣೆಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳು ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಅದೇ ವೇಳೆಯಲ್ಲೇ ಪೊಲೀಸರು ದಾಳಿ ಮಾಡಿ ಅವರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.