ADVERTISEMENT

22 ಪ್ರಕರಣಗಳ ರೌಡಿ ಕಾಲಿಗೆ ಗುಂಡೇಟು

ಕೋಗಿಲು ಕ್ರಾಸ್ ಬಳಿ ಸುಲಿಗೆ ಕಾರು ಬೆನ್ನಟ್ಟಿ ಸುತ್ತುವರೆದಿದ್ದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 2:26 IST
Last Updated 12 ಫೆಬ್ರುವರಿ 2021, 2:26 IST
ರೌಡಿ ಶಬರೀಶ್
ರೌಡಿ ಶಬರೀಶ್   

ಬೆಂಗಳೂರು: ಪದೇ ಪದೇ ಅಪರಾಧ ಕೃತ್ಯಗಳನ್ನು ಎಸಗಿ ಪರಾರಿಯಾಗುತ್ತಿದ್ದ ರೌಡಿ ಶಬರೀಷ್ ಅಲಿಯಾಸ್ ಪಪ್ಪಿ (27) ಎಂಬಾತನನ್ನು ಕಾಲಿಗೆ ಗುಂಡು ಹೊಡೆದು ಯಲಹಂಕ ಪೊಲೀಸರು ಸೆರೆಹಿಡಿದಿದ್ದಾರೆ.

’ಜೆ.ಜೆ. ನಗರದ ರಂಗನಾಥ್ ಕಾಲೊನಿ ನಿವಾಸಿ ಶಬರೀಷ್, ತನ್ನದೇ ಗ್ಯಾಂಗ್‌ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದ. 22 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಆತನ ಹೆಸರು, ಯಲಹಂಕ ಠಾಣೆ ರೌಡಿಪಟ್ಟಿಯಲ್ಲಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಆತ ಮಚ್ಚಿನಿಂದ ಹಲ್ಲೆ ಮಾಡಿದ್ದ. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ರಾಮಕೃಷ್ಣ ರೆಡ್ಡಿ, ಶಬರೀಷ್‌ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡಿರುವ ರೌಡಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಸಿಬ್ಬಂದಿಯೂ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದೂ ತಿಳಿಸಿದರು.

ADVERTISEMENT

ಕಾರು ಬೆನ್ನಟ್ಟಿದ್ದ ಪೊಲೀಸರು: ‘ಕೋಗಿಲು ಕ್ರಾಸ್ ಬಳಿ ಬುಧವಾರ ರಾತ್ರಿ ನಾಗರಾಜ್ ಎಂಬುವರ ಕಾರು ಅಡ್ಡಗಟ್ಟಿದ್ದ ಶಬರೀಷ್‌ ಹಾಗೂ ಸಹಚರರು, ಮೊಬೈಲ್, ನಗದು ಹಾಗೂ ಎಟಿಎಂ ಕಾರ್ಡ್‌ ಸುಲಿಗೆ ಮಾಡಿದ್ದರು. ಬಳಿಕ ನಾಗರಾಜ್‌ ಅವರನ್ನು ಬೆದರಿಸಿ, ಅವರ ಕಾರು ಸಮೇತವೇ ಪರಾರಿಯಾಗಿದ್ದರು. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಿಗಾಗಿ ಹುಡುಕಾಟ ನಡೆದಿತ್ತು’ ಎಂದು ಅಧಿಕಾರಿ ಹೇಳಿದರು.

‘ಸುಲಿಗೆ ಮಾಡಿದ್ದ ಕಾರಿನಲ್ಲೇ ರಾತ್ರಿಯಿಡೀ ಸುತ್ತಾಡಿದ್ದ ಆರೋಪಿಗಳು, ಗುರುವಾರ ನಸುಕಿನಲ್ಲಿ ಕೋಗಿಲು ಕ್ರಾಸ್ ಬಳಿ ಬಂದಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಇನ್‌ಸ್ಪೆಕ್ಟರ್ ರಾಮಕೃಷ್ಣ ರೆಡ್ಡಿ, ಪಿಎಸ್‌ಐಗಳಾದ ಸುನೀಲ್‌ಕುಮಾರ್, ಎನ್‌.ವಿ. ಹರೀಶ್ ನೇತೃತ್ವದ ತಂಡ ಸ್ಥಳಕ್ಕೆ ಹೋಗಿತ್ತು.’

‘ಪೊಲೀಸರನ್ನು ನೋಡುತ್ತಿದ್ದಂತೆ ಶಬರೀಷ್‌ ಹಾಗೂ ಸಹಚರರು, ಕಾರು ಏರಿ ದೊಡ್ಡಬಳ್ಳಾಪುರ ರಸ್ತೆಯಲ್ಲಿ ವೇಗವಾಗಿ ಹೊರಟಿದ್ದರು. ಸಿನಿಮೀಯ ರೀತಿಯಲ್ಲಿ ಪೊಲೀಸರು, ಆರೋಪಿಗಳ ಕಾರು ಬೆನ್ನಟ್ಟಿದ್ದರು. ಗಣೇಶ್ ಚಿತ್ರಮಂದಿರದ ಹಿಂಭಾಗದ ರಸ್ತೆಯಲ್ಲಿ ಕಸದ ರಾಶಿ ಇದ್ದಿದ್ದರಿಂದ ಆರೋಪಿಗಳ ಕಾರು ಮುಂದಕ್ಕೆ ಹೋಗದೇ ನಿಂತುಕೊಂಡಿತ್ತು. ಪೊಲೀಸರು ಕಾರು ಸುತ್ತುವರೆದು ಶರಣಾಗುವಂತೆ ಸೂಚಿಸಿದ್ದರು’ ಎಂದೂ ಅಧಿಕಾರಿ ವಿವರಿಸಿದರು.

‘ಕಾರಿನಿಂದ ಇಳಿದಿದ್ದ ಇಬ್ಬರು, ತಪ್ಪಿಸಿಕೊಂಡು ಓಡಿಹೋದರು. ಆರೋಪಿ ಶಬರೀಷ್, ಮಚ್ಚಿನಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ. ಶರಣಾಗುವಂತೆ ಹೇಳಿದ್ದ ಇನ್‌ಸ್ಪೆಕ್ಟರ್ ರಾಮಕೃಷ್ಣರೆಡ್ಡಿ, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದರು. ಅವರ ಮೇಲೆಯೇ ಆರೋಪಿ ಹಲ್ಲೆ ಮಾಡಲು ಮುಂದಾಗಿದ್ದ. ಅದೇ ಸಂದರ್ಭದಲ್ಲೇ ಇನ್‌ಸ್ಪೆಕ್ಟರ್, ಆತನ ಕಾಲಿಗೆ ಗುಂಡು ಹೊಡೆದರು’ ಎಂದೂ ಅಧಿಕಾರಿ ಹೇಳಿದರು.

‘ಏರ್‌ ಶೋ ನಡೆಯುತ್ತಿದ್ದ ಸಂದರ್ಭದಲ್ಲೇ ಆರೋಪಿ, ಯಲಹಂಕದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ. ಅಪರಾಧ ಕೃತ್ಯ ಎಸಗುವುದನ್ನೇ ವೃತ್ತಿ ಮಾಡಿಕೊಂಡಿದ್ದ ಈತ, ಸಾರ್ವಜನಿಕರನ್ನೂ ಬೆದರಿಸುತ್ತಿದ್ದ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.