ಬೆಂಗಳೂರು: ‘ನನ್ನ ಕುಟುಂಬದ ತಂಟೆಗೆ ಬಂದರೆ ಪೊಲೀಸ್ ಠಾಣೆಯನ್ನೇ ಸುಟ್ಟು ಹಾಕುತ್ತೇನೆ’ ಎಂದು ಇನ್‌ಸ್ಪೆಕ್ಟರ್‌ಗೆ ಬೆದರಿಕೆ ಹಾಕಿದ್ದ ಕುಖ್ಯಾತ ರೌಡಿ ರಾಜೇಶ್ ಅಲಿಯಾಸ್ ಪ್ರತಾಪ್‌ನ ಕಾಲಿಗೆ ಅನ್ನಪೂರ್ಣೇಶ್ವರಿನಗರ ಪೊಲೀಸರು ಗುಂಡು ಹೊಡೆದಿದ್ದಾರೆ.
ರಾಜೇಶ್, ಆತನ ಬಾಮೈದ ನಂದಕುಮಾರ್, ಸ್ನೇಹಿತರಾದ ಬಸವರಾಜು ಹಾಗೂ ಭರತ್ ಭಾನುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಕುಣಿಗಲ್‌ನಿಂದ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಎಸ್‌ಐ ರಾಜಶೇಖರಯ್ಯ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿಯಿತು. ನೈಸ್ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿಗಳು ಕಾರು ನಿಲ್ಲಿಸದೆ ಹೋಗಿದ್ದರು.
ತಕ್ಷಣ ಜೀಪಿನಲ್ಲಿ ಅವರನ್ನು ಹಿಂಬಾಲಿಸಿದ ಪೊಲೀಸರು, ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಕಾರು ಅಡ್ಡಗಟ್ಟಿದ್ದಾರೆ. ಈ ಹಂತದಲ್ಲಿ ಹೆಡ್‌ಕಾನ್‌ಸ್ಟೆಬಲ್ ಮಹೇಶ್ ಕುಮಾರ್ ಕೈಗೆ ಚಾಕುವಿನಿಂದ ಹಲ್ಲೆ ನಡೆಸಿದ ರಾಜೇಶ್, ಪಿಎಸ್‌ಐ ಮೇಲೂ ದಾಳಿಗೆ ಮುಂದಾಗಿದ್ದಾನೆ. ಆಗ ರಾಜಶೇಖರಯ್ಯ ಅವರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ಈ ವೇಳೆ ಇತರೆ ಸಿಬ್ಬಂದಿ ಉಳಿದ ಮೂವರನ್ನೂ ಹಿಡಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರು ವರ್ಷಗಳಿಂದ ರೌಡಿ ಚಟುವಟಿಕೆಗಳಲ್ಲಿ ತೊಡಗಿರುವ ಭಾವ–ಬಾಮೈದ (ರಾಜೇಶ್, ನಂದಕುಮಾರ್), ದರೋಡೆ ಮಾಡುವುದಕ್ಕಾಗಿಯೇ ವ್ಯವಸ್ಥಿತ ಗ್ಯಾಂಗ್ ಕಟ್ಟಿದ್ದಾರೆ. ಕೊಲೆ, ಕೊಲೆ ಯತ್ನ, ಸುಲಿಗೆ, ಪೋಕ್ಸೊ ಸೇರಿದಂತೆ ಬೆಂಗಳೂರು ಹಾಗೂ ಮೈಸೂರಿನ ಠಾಣೆಗಳಲ್ಲಿ ಇವರಿಬ್ಬರ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.
₹ 50 ಲಕ್ಷ ದೋಚಿದ್ದರು: ರಾಮುಗೌಡ ಎಂಬ ರಿಯಲ್ ಎಸ್ಟೇಟ್ ಉದ್ಯಮಿ, ತಮ್ಮ ಪರಿಚಯಸ್ಥರಾದ ದೇವೇಂದ್ರಪ್ಪ ಎಂಬುವರಿಗೆ ಸೇರಿದ ರಾಮೋಹಳ್ಳಿಯಲ್ಲಿರುವ ಎರಡು ಎಕರೆ ಜಮೀನು ಖರೀದಿಗೆ ಮುಂದಾಗಿದ್ದರು. ಅದಕ್ಕಾಗಿ ಇದೇ ಜುಲೈ 16ರಂದು ‘ಬ್ಯಾಂಕ್ ಆಫ್ ಬರೋಡಾ’ದ ಕಾಮಾಕ್ಷಿಪಾಳ್ಯ ಶಾಖೆಯಿಂದ ₹ 50 ಲಕ್ಷ ಡ್ರಾ ಮಾಡಿ, ಆ ಹಣವನ್ನು ಆರೋಗ್ಯ ಬಡಾವಣೆಯಲ್ಲಿರುವ ಸಂಬಂಧಿ ಭಾಗ್ಯಮ್ಮ ಅವರ ಮನೆಯಲ್ಲಿಟ್ಟಿದ್ದರು.
ಮರುದಿನ ಬೆಳಿಗ್ಗೆ ಜಮೀನು ಖರೀದಿ ಕುರಿತು ಮನೆಯ ಪಾರ್ಕಿಂಗ್‌ನಲ್ಲಿ ಮಾತುಕತೆ ನಡೆಯುತ್ತಿತ್ತು. ದೇವೇಂದ್ರಪ್ಪ, ರಾಮುಗೌಡ, ಅವರ ಭಾವ ಗಂಗಯ್ಯ ಹಾಗೂ ಇತರೆ ಪರಿಚಿತರು ಅಲ್ಲಿ ಸೇರಿದ್ದರು. ಆಗ ಎರಡು ಕಾರುಗಳಲ್ಲಿ ಏಕಾಏಕಿ ಪಾರ್ಕಿಂಗ್ ಪ್ರದೇಶಕ್ಕೆ ನುಗ್ಗಿದ್ದ ಗ್ಯಾಂಗ್, ಮಚ್ಚು–ಲಾಂಗು ಹಾಗೂ ಆಟಿಕೆ ಪಿಸ್ತೂಲ್‌ಗಳನ್ನು ತೋರಿಸಿ ಬೆದರಿಸಿತ್ತು. ಇಬ್ಬರು ಮನೆಗೆ ನುಗ್ಗಿ, ₹ 50 ಲಕ್ಷ ಹಣವಿದ್ದ ಸೂಟ್‌ಕೇಸ್ ತೆಗೆದುಕೊಂಡು ಬಂದಿದ್ದರು. ಬಳಿಕ, ‘ದೂರು ಕೊಟ್ಟರೆ ಎಲ್ಲರನ್ನೂ ಗುಂಡಿಕ್ಕಿ ಕೊಲ್ಲುತ್ತೇವೆ’ ಎಂದು ಬೆದರಿಸಿ ಹೊರಟು ಹೋಗಿದ್ದರು. ಈ ಸಂಬಂಧ ರಾಮುಗೌಡ ಠಾಣೆ ಮೆಟ್ಟಿಲೇರಿದ್ದರು.
ಕಾರಿನ ನೋಂದಣಿ ಸಂಖ್ಯೆ ಆಧರಿಸಿ ರಾಜೇಶ್‌ನ ಪತ್ನಿ ಸೇರಿದಂತೆ ಆರೋಪಿಗಳಿಗೆ ಆಶ್ರಯ ಕೊಟ್ಟಿದ್ದ 13 ಮಂದಿಯನ್ನು ಬಂಧಿಸಿದ್ದ ಪೊಲೀಸರು, ₹ 12.30 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರುಗಳನ್ನು ಜಪ್ತಿ ಮಾಡಿದ್ದರು. ಆದರೆ, ಪ್ರಮುಖ ಆರೋಪಿಗಳಾದ ಭಾವ–ಬಾಮೈದ, ನಿರಂತರವಾಗಿ ವಾಸ್ತವ್ಯ ಬದಲಿಸುತ್ತ ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಸುತ್ತಾಡಿಕೊಂಡಿದ್ದರು. ಮೊಬೈಲ್ ಕರೆ ವಿವರಗಳ (ಸಿಡಿಆರ್) ಮೇಲೆ ನಿರಂತರವಾಗಿ ನಿಗಾ ಇಟ್ಟಿದ್ದ ಪೊಲೀಸರಿಗೆ, ಭಾನುವಾರ ಬೆಳಿಗ್ಗೆ ಅವರು ನಗರಕ್ಕೆ ಬರುತ್ತಿರುವ ವಿಚಾರ ಗೊತ್ತಾಗಿತ್ತು.
ಸವಾಲೆಸೆದು ಸಿಕ್ಕಿಬಿದ್ದ!
ತನ್ನ ಪತ್ನಿಯನ್ನು ಬಂಧಿಸಿದ್ದರಿಂದ ಸಿಟ್ಟಾಗಿ ಇನ್‌ಸ್ಪೆಕ್ಟರ್ ಕೃಷ್ಣ ಅವರಿಗೆ ಕರೆ ಮಾಡಿದ್ದ ರಾಜೇಶ್, ‘ತಾಕತ್ ಇದ್ದರೆ ನನ್ನನ್ನು ಹಿಡಿಯಿರಿ. ಅದನ್ನು ಬಿಟ್ಟು ಕುಟುಂಬದ ತಂಟೆಗೆ ಹೋಗಬೇಡಿ. ಪತ್ನಿಯನ್ನು ಬಿಟ್ಟು ಕಳುಹಿಸದಿದ್ದರೆ ಠಾಣೆಗೆ ನುಗ್ಗಿ ನಿಮ್ಮನ್ನು ಶೂಟ್ ಮಾಡಿ ಸಾಯಿಸುತ್ತೇನೆ. ಪೆಟ್ರೋಲ್ ಸುರಿದು ಠಾಣೆಯನ್ನೂ ಸುಟ್ಟು ಹಾಕುತ್ತೇನೆ’ ಎಂದು ಬೆದರಿಕೆ ಹಾಕಿದ್ದ. ಆನಂತರ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತ್ತು.
ಭಾವ–ಬಾಮೈದನ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಿದ್ದ ಡಿಸಿಪಿ ರವಿ.ಡಿ.ಚನ್ನಣ್ಣನವರ್, ‘ರಾಜೇಶ್ ಹಾಗೂ ನಂದಕುಮಾರ್ ಪಿಸ್ತೂಲ್ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ಅವರ ಬಗ್ಗೆ ಯಾರೇ ಸುಳಿವು ಕೊಟ್ಟರೂ, ₹ 25 ಸಾವಿರ ಬಹುಮಾನ ನೀಡುತ್ತೇವೆ’ ಎಂದು ಘೋಷಿಸಿದ್ದರು. ಅವರಿಬ್ಬರ ಫೋಟೊಗಳನ್ನೂ ಬಿಡುಗಡೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.