ADVERTISEMENT

ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ; ರೌಡಿ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 19:56 IST
Last Updated 11 ಜನವರಿ 2022, 19:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಂಧಿಸಲು ಬಂದಿದ್ದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ರೌಡಿ ನರಸಿಂಹ ಅಲಿಯಾಸ್ ರೆಡ್ಡಿ ಎಂಬಾತನನ್ನು ಕಾಲಿಗೆ ಗುಂಡು ಹೊಡೆದು ಸೆರೆ ಹಿಡಿಯಲಾಗಿದೆ.

‘ಕೊಲೆ, ದರೋಡೆ, ಅಪಹರಣ ಹಾಗೂ ಕಳ್ಳತನ ಸೇರಿದಂತೆ 30 ಪ್ರಕರಣಗಳು ನರಸಿಂಹ ವಿರುದ್ಧ ದಾಖಲಾಗಿದ್ದವು. ತಲೆಮರೆಸಿಕೊಂಡಿದ್ದ ಆತನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪದೇ ಪದೇ ಅಪರಾಧ ಕೃತ್ಯ ಎಸಗುತ್ತಿದ್ದ ರೌಡಿ, ಸಾರ್ವಜನಿಕರನ್ನು ಬೆದರಿಸುತ್ತಿದ್ದ. ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿದ್ದ ಕಾರುಗಳಿಗೆ ಬೆಂಕಿ ಹಚ್ಚಿ ಹಾನಿಯನ್ನುಂಟು ಮಾಡುತ್ತಿದ್ದ. ಹಲವು ಪ್ರಕರಣಗಳ ವಿಚಾರಣೆಗೂ ಆತ ಹಾಜರಾಗುತ್ತಿರಲಿಲ್ಲ. ಹೀಗಾಗಿ, ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು.’

ADVERTISEMENT

‘ಹೊಸಕೆರೆಹಳ್ಳಿಯ ಕೆರೆ ಪ್ರದೇಶದಲ್ಲಿ ಆರೋಪಿ ಕಾಣಿಸಿಕೊಂಡಿದ್ದ. ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ಹೋಗಿದ್ದ ಪೊಲೀಸರ ತಂಡ, ರೌಡಿಯನ್ನು ಬಂಧಿಸಲು ಮುಂದಾಗಿತ್ತು. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆತ ಕಾನ್‌ಸ್ಟೆಬಲ್ ಮೋಹನ್‌ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಕಾನ್‌ಸ್ಟೆಬಲ್‌ ಅವರ ರಕ್ಷಣೆಗೆ ಧಾವಿಸಿದ ಸಬ್‌ ಇನ್‌ಸ್ಪೆಕ್ಟರ್ ಸುನೀಲ್, ರೌಡಿ ಕಾಲಿಗೆ ಗುಂಡು ಹೊಡೆದಿದ್ದರು’ ಎಂದುಮಾಹಿತಿ ನೀಡಿದರು.

‘ಗಾಯಾಳುಗಳಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.