ADVERTISEMENT

‘ಸಾಂಕೇತಿಕ ಸ್ಪರ್ಧೆಯಲ್ಲ, ಗಂಭೀರವಾಗಿ ಕಣದಲ್ಲಿದ್ದೇವೆ’

ಆರ್‌.ಆರ್. ನಗರ ವಿಧಾನಸಭಾ ಕ್ಷೇತ್ರ –ಪ್ರಜಾವಾಣಿ ಸಂದರ್ಶನ–

ವಿ.ಎಸ್.ಸುಬ್ರಹ್ಮಣ್ಯ
Published 31 ಅಕ್ಟೋಬರ್ 2020, 19:55 IST
Last Updated 31 ಅಕ್ಟೋಬರ್ 2020, 19:55 IST
ಅರವಿಂದ್‌ ಕೆ.ಬಿ.
ಅರವಿಂದ್‌ ಕೆ.ಬಿ.   

ಬೆಂಗಳೂರು: ಆಮ್‌ ಆದ್ಮಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಚಳವಳಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಉದ್ಯಮಿ ಅರವಿಂದ್ ಕೆ.ಬಿ. ಈಗ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಖಜಾಂಚಿ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಚಳವಳಿಯ ರಾಜಕಾರಣದಿಂದ ಚುನಾವಣಾ ರಾಜಕಾರಣದತ್ತ ಹೊರಳಿರುವ ಅವರಿಗೆ ಇದು ಮೊದಲ ಚುನಾವಣೆ. ಪಾರದರ್ಶಕ ಆಡಳಿತ, ಭ್ರಷ್ಟಾಚಾರ ನಿಗ್ರಹ, ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿಯಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ಕೆಆರ್‌ಎಸ್‌ ಸಾಂಕೇತಿಕವಾಗಿ ರಾಜರಾಜೇಶ್ವರನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿಲ್ಲ. ಮತದಾರರ ಯೋಚನೆಯ ಮೇಲೆ ಪ್ರಭಾವ ಬೀರುವುದು ಖಚಿತ ಎನ್ನುತ್ತಾರೆ ಅವರು.

l ಹೋರಾಟಗಳಲ್ಲಿ ಸಕ್ರಿಯವಾಗಿದ್ದವರು ಚುನಾವಣಾ ಕಣಕ್ಕಿ ಇಳಿದಿದ್ದೀರಿ. ಜನರು ಹೇಗೆ ಸ್ವೀಕರಿಸಿದ್ದಾರೆ?

ADVERTISEMENT

ರಾಜರಾಜೇಶ್ವರಿನಗರ ಕ್ಷೇತ್ರ ಸಮಸ್ಯೆಗಳನ್ನೇ ಹೊದ್ದು ಮಲಗಿದೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ದೊಡ್ಡ ಮಟ್ಟದಲ್ಲಿದೆ. ಕ್ಷೇತ್ರದ ಬಡವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಕೆಲಸವೇ ನಡೆದಿಲ್ಲ. ಪಾರದರ್ಶಕ ಆಡಳಿತ ಮತ್ತು ನಗರ ಬಡತನ ನಿರ್ಮೂಲನೆ ಕುರಿತು ನಾವು ಆಡುತ್ತಿರುವ ಮಾತುಗಳಿಗೆ ಜನರು ಬೆಂಬಲ ಸೂಚಿಸುತ್ತಿದ್ದಾರೆ. ನಮ್ಮ ಮಾತುಗಳಲ್ಲಿ ಜನರಿಗೆ ವಿಶ್ವಾಸ ಮೂಡಿದೆ. ಅದು ಮತಗಳಾಗಿ ಪರಿವರ್ತನೆ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

l ಒಂದೇ ಪ್ರಯತ್ನಕ್ಕೆ ಪ್ರಬಲ ಎದುರಾಳಿಗಳನ್ನು ಮಣಿಸಲು ಸಾಧ್ಯವೆ?

ಚುನಾವಣೆ ಘೋಷಣೆ ಆದಾಗ ಧಾರವಾಡದಲ್ಲಿ ಹೋರಾಟದಲ್ಲಿದ್ದೆ. ಪಕ್ಷದ ಸೂಚನೆಯಂತೆ ಬೆಂಗಳೂರಿಗೆ ಬಂದು ನಾಮಪತ್ರ ಸಲ್ಲಿಸಿದೆ. ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಸಾಕಷ್ಟು ಇದ್ದಾರೆ. ಬಡತನ, ಮೂಲಸೌಕರ್ಯ ಕೊರತೆ, ಭ್ರಷ್ಟಾಚಾರದಂತಹ ಪ್ರಮುಖ ವಿಚಾರಗಳನ್ನು ಚುನಾವಣಾ ಪ್ರಚಾರದ ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಸಾಂಕೇತಿಕ ಸ್ಪರ್ಧೆ ಎಂದು ಯಾವತ್ತೂ ನಾವು ಪರಿಗಣಿಸಿಲ್ಲ. ಚುನಾವಣೆ ಬಳಿಕವೂ ನಾನು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಸಕ್ರಿಯವಾಗಿ ಇರುತ್ತೇನೆ.

l ನಿಮ್ಮ ನೇರ ಎದುರಾಳಿ ಯಾರು?

ಬಿಜೆಪಿ, ಕಾಂಗ್ರೆಸ್‌ ಅಥವಾ ಜೆಡಿಎಸ್‌ ಅಭ್ಯರ್ಥಿಗಳನ್ನು ಪಕ್ಷದ ಆಧಾರದ ಮೇಲೆ ನಾವು ನೇರ ಎದುರಾಳಿಗಳು ಎಂದು ಪರಿಗಣಿಸಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿಯ ಕೆಟ್ಟ ರಾಜಕಾರಣದ ‘ಐಕಾನ್‌’ನಂತೆ ಮುನಿರತ್ನ ಇದ್ದಾರೆ. ಜೆಡಿಎಸ್‌ ಪಕ್ಷದವರು ಚಹಾ ಕೊಟ್ಟರೆ ಒಬ್ಬರ ಜತೆ ಹೋಗುತ್ತಾರೆ. ದೋಸೆ ಕೊಟ್ಟರೆ ಮತ್ತೊಬ್ಬರ ಜತೆ ಹೋಗುತ್ತಾರೆ.

l ಜಾತಿ ರಾಜಕಾರಣ ಚುನಾವಣೆ ಮೇಲೆ ಪ್ರಭಾವ ಬೀರಲಿದೆಯಾ?

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪಕ್ಷಗಳು ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ. ಕೆಆರ್‌ಎಸ್‌ ಯಾವತ್ತೂ ಜಾತಿಯನ್ನು ರಾಜಕಾರಣದ ಭಾಗವಾಗಿ ನೋಡಿಲ್ಲ. ನಾನು ಕೂಡ ಜಾತಿಯ ಬಗ್ಗೆ ಮಾತನಾಡಲು ಬಯಸುವುದಿಲ್ಲ.

l ಚುನಾವಣೆಗೆ ಹಣ ನೀಡಿ ಎಂಬ ನಿಮ್ಮ ಮನವಿಗೆ ಸ್ಪಂದನೆ ಹೇಗಿದೆ?

ನನ್ನ ಖಾತೆಗೆ ನೇರವಾಗಿ ₹ 40,000ದಷ್ಟು ಬಂದಿದೆ. ಕೆಲವು ಸ್ನೇಹಿತರೂ ದೇಣಿಗೆ ನೀಡಿದ್ದಾರೆ. ಒಟ್ಟು ಪ್ರಚಾರ ವೆಚ್ಚದ ಶೇ 40ರಷ್ಟು ದೇಣಿಗೆಯಿಂದಲೇ ಬಂದಿದೆ. ಹೊಸ ಮಾದರಿಯ ರಾಜಕಾರಣಕ್ಕೆ ಜನರು ಸ್ಪಂದಿಸುತ್ತಾರೆ ಎಂಬುದು ಸಾಬೀತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.