ADVERTISEMENT

ಸಿಬಿಐ ಹೆಸರಿನಲ್ಲಿ ವ್ಯಕ್ತಿಗೆ ಬೆದರಿಕೆ: ₹5 ಲಕ್ಷ ವಸೂಲಿ

ಫೇಸ್‌ಬುಕ್‌ನಲ್ಲಿ ಆರೋಪಿ ಪರಿಚಯ: ಲೈಂಗಿಕ ಪ್ರಚೋದನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 2:14 IST
Last Updated 11 ಜುಲೈ 2022, 2:14 IST
   

ಬೆಂಗಳೂರು: ಸಾಮಾಜಿಕ ಮಾಧ್ಯಮದ ಮೂಲಕ ನಗರದ ನಿವಾಸಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ಯುವತಿ ಹಾಗೂ ಆಕೆಯ ಸಹಚರರು, ಸಿಬಿಐ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ₹ 5 ಲಕ್ಷ ವಸೂಲಿ ಮಾಡಿದ್ದಾರೆ.

ಹಣ ಕಳೆದುಕೊಂಡಿರುವ ವ್ಯಕ್ತಿ, ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ಯುವತಿ ಹಾಗೂ ಸಹಚರರ ಮಾಹಿತಿ ಕಲೆಹಾಕುತ್ತಿದ್ದಾರೆ.

‘ದೂರುದಾರರಿಗೆ ಫೇಸ್‌ಬುಕ್‌ನಲ್ಲಿ ಯುವತಿ ಪರಿಚಯವಾಗಿತ್ತು. ಚಾಟಿಂಗ್ ಮಾಡಲಾರಂಭಿಸಿದ್ದ ಇಬ್ಬರೂ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದರು. ನಂತರ, ವಾಟ್ಸ್‌ಆ್ಯಪ್‌ನಲ್ಲಿ ಮಾತುಕತೆ ಮುಂದುವರಿದಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ರಾತ್ರಿಯಿಡೀ ವಿಡಿಯೊ ಕರೆ ಮಾಡುತ್ತಿದ್ದ ಯುವತಿ, ದೂರುದಾರರನ್ನು ಲೈಂಗಿಕವಾಗಿ ಪ್ರಚೋದಿಸಿ ನಗ್ನವಾಗುವಂತೆ ಮಾಡು ತ್ತಿದ್ದಳು. ಅದೇ ವಿಡಿಯೊವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದಳು. ಕೆಲ ದಿನ ಬಿಟ್ಟು ವಿಡಿಯೊ ಕಳುಹಿಸಿದ್ದ ಯುವತಿ, ಹಣಕ್ಕೆ ಬೇಡಿಕೆ ಇರಿಸಿದ್ದಳು’ ಎಂದೂ ತಿಳಿಸಿವೆ.

‘ದೂರುದಾರ ಹಣ ನೀಡಿರಲಿಲ್ಲ. ಕೆಲದಿನ ಬಿಟ್ಟು ದೂರುದಾರರಿಗೆ ಕರೆ ಮಾಡಿದ್ದ ಅಪರಿಚಿತರು, ಸಿಬಿಐ ಅಧಿಕಾರಿಯೆಂದು ಹೇಳಿಕೊಂಡಿದ್ದರು. ‘ನಿಮ್ಮ ಹೆಸರು ಬರೆದಿಟ್ಟು ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೊಬೈಲ್‌ನಲ್ಲಿ ನಿಮ್ಮ ನಗ್ನ ವಿಡಿಯೊ ಸಿಕ್ಕಿದೆ. ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಸದ್ಯದಲ್ಲೇ ಮನೆ ಮೇಲೆ ದಾಳಿ ಮಾಡಲಿದ್ದೇವೆ. ₹5 ಲಕ್ಷ ನೀಡಿದರೆ ನಿಮ್ಮನ್ನು ಪ್ರಕರಣದಿಂದ ಖುಲಾಸೆ ಮಾಡುತ್ತೇವೆ’ ಎಂದಿದ್ದರು. ಹೆದರಿದ್ದ ದೂರುದಾರ, ₹5 ಲಕ್ಷ ನೀಡಿದ್ದರು. ಅದಾದ ನಂತರವೂ ಆರೋಪಿಗಳು ಹಣ ಕೇಳಿದ್ದರಿಂದ ದೂರುದಾರ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಪೊಲೀಸ್ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.