ADVERTISEMENT

ಕುರುಬರ ಎಸ್‍ಟಿ ಹೋರಾಟದ ಹಿಂದೆ ಆರ್‌ಎಸ್‍ಎಸ್‌: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 23:06 IST
Last Updated 1 ಡಿಸೆಂಬರ್ 2020, 23:06 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕುರುಬರ ಎಸ್‍ಟಿ ಹೋರಾಟದ ಹಿಂದೆ ಆರ್‌ಎಸ್‍ಎಸ್‍ ಕೈವಾಡವಿದೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,‘ಎಸ್‍.ಟಿ. ಹೋರಾಟದ ಹೆಸರಲ್ಲಿ ಕುರುಬ ಸಮುದಾಯದ ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಹಾಗೂ ಬಿ.ಎಲ್‌. ಸಂತೋಷ್ ಅವರು ಈಶ್ವರಪ್ಪ ಅವರನ್ನು ಬಳಸಿಕೊಂಡು ಕುರುಬ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ’ ಎಂ‌ದರು.

‘ಹೋರಾಟ ತಪ್ಪು ಎಂದು ಹೇಳುವುದಿಲ್ಲ. ಆರು ವರ್ಷದಿಂದ ಸುಮ್ಮನಿದ್ದು ಈಗ ಹೋರಾಟಕ್ಕೆ ಕೈ ಹಾಕಿರುವುದರ ಉದ್ದೇಶವಾದರೂ ಏನು? ಹೋರಾಟದ ಹಿಂದೆ ಆರ್‌ಎಸ್‍ಎಸ್ ಇರುವುದರ ಮರ್ಮವೇನು? ಆರ್‌ಎಸ್‍ಎಸ್ ನವರು ಎಂದೂ ಮೀಸಲಾತಿ ಪರ ಇಲ್ಲ. ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ ಮತ್ತು ಮಂಡಲ್ ವರದಿಯನ್ನು ಅವರು ವಿರೋಧಿಸಿದ್ದಾರೆ’ ಎಂದರು.

ADVERTISEMENT

‘ಕುರುಬರ ನಾಯಕ ತಾನೇ ಎಂದು ಈಶ್ವರಪ್ಪ ಹೇಳಿಕೊಳ್ಳಲಿ. ಅದಕ್ಕೆ ನನ್ನ ತಕರಾರು ಇಲ್ಲ. ಆದರೆ, ನಾಯಕ ಎಂದು ನಾವೇ ಹೇಳಿಕೊಳ್ಳುವುದಲ್ಲ. ಜನ ತೀರ್ಮಾನ ಮಾಡಬೇಕು’ ಎಂದ ಅವರು, ‘ಈಶ್ವರಪ್ಪ ಅವರು ಮೀಸಲಾತಿ ಪರ ಹೋರಾಟ ಮಾಡಿದವರಲ್ಲ. ಸದನದಲ್ಲಿಯೂ ಧ್ವನಿ ಎತ್ತಿದವರಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡನ್ನು ಈಶ್ವರಪ್ಪ ಎಲ್ಲಿ ಬಿಟ್ಟರು’ ಎಂದೂ ಪ್ರಶ್ನಿಸಿದರು.

ಕಾಯ್ದೆಗೆ ವಿರೋಧ: ‘ಲವ್ ಜಿಹಾದ್ ತಡೆ ಮತ್ತು ಗೋ ಹತ್ಯೆ ವಿಚಾರದಲ್ಲಿ ರಾಜ್ಯ ಸರ್ಕಾರ ಕಾಯ್ದೆ ತರಲು ಮುಂದಾದರೆ ವಿರೋಧಿಸುತ್ತೇನೆ’ ಸಿದ್ದರಾಮಯ್ಯ ಹೇಳಿದರು.

ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ಕುರಿತು ಮುಸ್ಲಿಂ ಸಮುದಾಯದ ಮುಖಂಡರು ಸಿದ್ದರಾಮಯ್ಯ ಜೊತೆ ಮಂಗಳವಾರ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ‘ಗೋಹತ್ಯೆ ನಿಷೇಧ ಕಾಯ್ದೆಯನ್ನು ಬಿಜೆಪಿ ಆಡಳಿತ
ವಿರುವ ಗೋವಾದಲ್ಲಿ ಏಕೆ ಜಾರಿಗೊಳಿಸಿಲ್ಲ’ ಎಂದು ಪ್ರಶ್ನಿಸಿದರು. ‘ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದರೆ ತೀವ್ರ
ವಾಗಿ ವಿರೋಧಿಸುತ್ತೇವೆ’ ಎಂದರು.

‘ಲವ್‌ ಜಿಹಾದ್‌ ತಡೆ ಕಾಯ್ದೆ ತರುವ ರಾಜ್ಯ ಸರ್ಕಾರದ ಚಿಂತನೆ ಮೂರ್ಖತನದ್ದು. ಉತ್ತರ ಪ್ರದೇಶದಲ್ಲಿ ಜಾರಿಯಿ
ರುವ ಈ ಕಾನೂನು ಅಸಾಂವಿಧಾನಿಕ. ನಿಗದಿತ ವಯೋಮಾನ ದಾಟಿದ ಪ್ರತಿಯೊಬ್ಬರಿಗೂ ತಮಗೆ ಇಷ್ಟವಾದವ
ರನ್ನು ವಿವಾಹವಾಗುವ ಸ್ವಾತಂತ್ರ್ಯ ಇದೆ.ಹಿಂದೂ ಮುಸ್ಲಿಂನನ್ನು, ಮುಸ್ಲಿಂ ಹಿಂದೂವನ್ನು ಮದುವೆಯಾಗುವಂತಿಲ್ಲ ಎಂಬ ನಿಯಮ ರೂಪಿಸುವುದು ತಪ್ಪು’ ಎಂದರು.

‘ಮೊಘಲರ ಆಳ್ವಿಕೆ ಕಾಲದಲ್ಲಿ ಸಾಕಷ್ಟು ಅಂತರ್‌ಧರ್ಮೀಯ ವಿವಾಹಗಳಾಗಿವೆ. ಹಿಂದೂ –ಮುಸ್ಲಿಂ ದಂಪತಿಗೆ ಜನಿಸಿರುವ ಸಾಕಷ್ಟು ಮಂದಿ ಇದ್ದರು. ಇಂಥ ಕಾನೂನು ಜಾರಿಗೊಳಿಸಲು ಸಂವಿಧಾನ ಅವಕಾಶ ನೀಡುವುದಿಲ್ಲ. ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿದರೆ ಕಾಯ್ದೆ ವಜಾಗೊಳ್ಳಲಿದೆ. ಆದರೂ ಈ ಕೆಲಸಕ್ಕೆ ಸರ್ಕಾರ ಕೈಹಾಕಿದರೆ ಅದು ದುರುದ್ದೇಶದಿಂದ ಕೂಡಿದ ಕೆಲಸವಲ್ಲದೆ ಬೇರೇನು’ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.