ADVERTISEMENT

ಮಾಹಿತಿಗೆ ವೆಬ್‌ಸೈಟ್‌ ನೋಡಿ!

ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಗೆ ಅಧಿಕಾರಿಗಳ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:31 IST
Last Updated 1 ಮಾರ್ಚ್ 2020, 19:31 IST

ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಜಾಲತಾಣ ಆರಂಭಿಸುವ ಮೂಲಕ ಮಾಹಿತಿ ಪಡೆಯುವ ಹಕ್ಕಿಗೆ ಬಲ ತುಂಬಿದೆ. ಆದರೆ, ಸರ್ಕಾರದ ಕೆಲವು ಅಧೀನ ಸಂಸ್ಥೆಗಳು ಆರ್‌ಟಿಐ ಅರ್ಜಿಗಳಿಗೆ ಯಾವುದೇ ಕಿಮ್ಮತ್ತು ನೀಡುತ್ತಿಲ್ಲ.

‘ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ’ಗೆ ಲಕ್ಷ್ಮೀಕಾಂತ ಎಂಬುವವರು ಆರ್‌ಟಿಐ ಅಡಿ ಕೆಲ ಮಾಹಿತಿಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನಿಖರ ಮಾಹಿತಿ ಹಂಚಿಕೊಳ್ಳದೇ ಸಂಸ್ಥೆಯು ನೀಡಿರುವ ಒಂದೇ ಸಾಲಿನ ಉತ್ತರ ಎಂದರೆ, ‘ನಿಮಗೆ ಬೇಕಾದ ಮಾಹಿತಿಯನ್ನು ಸಂಸ್ಥೆಯ ಅಂತರ್ಜಾಲದಲ್ಲಿ ನೋಡಿಕೊಳ್ಳಬಹುದು’ ಎನ್ನುವುದು.

ಈ ಸಂಸ್ಥೆಯಲ್ಲಿ ಕೆಲವು ವಸ್ತುಗಳ ಖರೀದಿಯಲ್ಲಿ ಟೆಂಡರ್‌ ನಿಯಮ ಪಾಲನೆ ಆಗಿಲ್ಲ. ₹5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಟೆಂಡರ್‌ ಇಲ್ಲದೇ ಖರೀದಿಸಲಾಗಿದೆ ಎಂಬ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಸಂಸ್ಥೆ ಮಾಹಿತಿಯನ್ನು ನೀಡದೇ ಮುಚ್ಚಿಡಲು ಯತ್ನಿಸುತ್ತಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಇದೇ ರೀತಿಯಲ್ಲಿ ಬಹಳಷ್ಟು ಇಲಾಖೆಗಳು ಮತ್ತು ಸರ್ಕಾರದ ಅಧೀನ ಸಂಸ್ಥೆಗಳು ನಿಖರ ಮಾಹಿತಿ ನೀಡುವುದನ್ನು ತಪ್ಪಿಸಿಕೊಳ್ಳಲು ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ ಸಾರ್ವಜನಿಕರನ್ನೇ ದಾರಿ ತಪ್ಪಿಸುತ್ತಿವೆ ಎಂದು ಅವರು ದೂರಿದರು.

ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ತೀರ್ಪಿನ ಅನ್ವಯ ಆರ್‌ಟಿಐ ಆನ್‌ಲೈನ್ ಜಾಲತಾಣ ಆರಂಭಿಸಿದೆ. ಇದರಿಂದ ಈ ಹಿಂದಿನಂತೆ ಕಚೇರಿಗಳಿಗೆ ತೆರಳಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ವೆಬ್‌ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು. ಸರ್ಕಾರದ ಉದ್ದೇಶವೇನೋ ಒಳ್ಳೆಯದೇ. ಆದರೆ, ಸಾರ್ವಜನಿಕ ಹಿತಾಸಕ್ತಿಯ ಮತ್ತು ಹಣದ ವ್ಯವಹಾರದಲ್ಲಿ ಪಾರದರ್ಶಕತೆಯ ಸಂದೇಹ ಬಂದರೆ, ಅದಕ್ಕೆ ಆಯಾ ಸಂಸ್ಥೆಗಳ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದಿದ್ದಾರೆ.

‘ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ. ಆದರೆ, ಆರ್‌ಟಿಐ ಮೂಲಕ ಕೋರಿದ ಮಾಹಿತಿಯನ್ನು ಅಧಿಕಾರಿಗಳು ನೀಡಲೇಬೇಕಾಗುತ್ತದೆ’ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.