ADVERTISEMENT

ರುದ್ರೇಶ್‌ ಕೊಲೆ: ಸಾಕ್ಷಿ ಮರು ವಿಚಾರಣೆ ವಿರೋಧಿಸಿದ್ದ ಆರೋಪಿಗಳ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 8:07 IST
Last Updated 8 ಜನವರಿ 2019, 8:07 IST
ರುದ್ರೇಶ್‌
ರುದ್ರೇಶ್‌   

ಬೆಂಗಳೂರು: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಮರು ವಿಚಾರಣೆ ವಿರೋಧಿಸಿದ್ದ ಆರೋಪಿಗಳ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಈ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿದೆ.

‘ಅಧೀನ ನ್ಯಾಯಾಲಯದ ಕ್ರಮ, ಆರೋಪಿಗಳು ಹೇಳುವಷ್ಟು ಗಂಭಿರ ಸ್ವರೂಪ ಹೊಂದಿಲ್ಲ‌. ಕಾನೂನಾತ್ಮಕ ಮತ್ತು ತಾಂತ್ರಿಕ ಅಂಶಗಳ ಆಧಾರದಲ್ಲಿ ಸಾಕ್ಷಿಗಳ ಮರು ವಿಚಾರಣೆ ತಪ್ಪಲ್ಲ’ ಎಂಬ ಅಭಿಪ್ರಾಯನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.

ಏನಿದು ಅರ್ಜಿ ?

ADVERTISEMENT

ಶಿವಾಜಿ ನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿನ ಶ್ರೀನಿವಾಸ ಮೆಡಿಕಲ್‌ ಸ್ಟೋರ್ ಎದುರು ತನ್ನ ಸ್ನೇಹಿತರ ಜತೆ ನಿಂತಿದ್ದ ರುದ್ರೇಶ್‌ ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರುಕೊಲೆ ಮಾಡಿದ್ದರು.

ಈ ಘಟನೆ 2016ರ ಅಕ್ಟೋಬರ್ 16ರಂದು ಬೆಳಗ್ಗೆ 9 ಗಂಟೆ ವೇಳೆಗೆ ನಡೆದಿತ್ತು.

ಈ ಪ್ರಕರಣದಲ್ಲಿ, ಅಸೀಮ್‌ ಷರೀಫ್, ಇರ್ಫಾನ್ ಪಾಷಾ, ವಸೀಂ ಅಹಮದ್, ಮಹಮ್ಮದ್‌ ಸಾದಿಕ್‌ ಅಲಿಯಾಸ್ ಮಜಹರ್ ಮತ್ತು ಮಹಮ್ಮದ್ ಮುಜೀಬುಲ್ಲಾ ಅಲಿಯಾಸ್ ಮೌಲಾ ಆರೋಪಿಗಳಾಗಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ರುದ್ರೇಶ್ ಸ್ನೇಹಿತರಾದ ಬಿ.ಜಯರಾಂ, ಡಿ.ಕುಮಾರೇಶನ್ ಮತ್ತು ಹರಿಕೃಷ್ಣ ಅವರುಸಾಕ್ಷಿಗಳಾಗಿದ್ದಾರೆ.

ಎನ್ಐಎ ವಿಶೇಷ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

‘ವಿಚಾರಣೆ ವೇಳೆ ಹತ್ಯೆಗೆ ಬಳಸಲಾದ ಮಚ್ಚು ಮತ್ತು ಮೋಟಾರ್ ಬೈಕ್ ಅನ್ನು ಸಕಾಲದಲ್ಲಿ ಹಾಜರುಪಡಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಕೋರ್ಟ್ ಕಟ್ಟಡದಲ್ಲಿರುವ ಮಾಲ್ಖಾನಾ ದಲ್ಲಿ ಪೊಲೀಸರು ವಶಪಡಿಸಿ ಕೊಂಡ ವಸ್ತುಗಳನ್ನು ಇರಿಸಲು ಜಾಗವಿರಲಿಲ್ಲ’ಎಂದು ಎನ್ಐಎ ಮೌಖಿಕವಾಗಿ ನ್ಯಾಯಾಧೀಶರಿಗೆ ತಿಳಿಸಿತ್ತು.

ಇದನ್ನು ಮಾನ್ಯ ಮಾಡಿದ್ದ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಆರೋಪಿಗಳ ಪಾಟೀ ಸವಾಲು ಮುಂದುವರಿಸಿದ್ದರು. ಆದರೆ, ಈ ಕ್ರಮವನ್ನು ವಿರೋಧಿಸಿದ್ದ ಆರೋಪಿಗಳು, ‘ಒಮ್ಮೆ ಸಾಕ್ಷಿ ವಿಚಾರಣೆ ನಡೆದ ನಂತರ ಪುನಃ ನಡೆಸಲು ಸಾಧ್ಯವಿಲ್ಲ. ಇದು ಕಾನೂನು ಬಾಹಿರ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಆಕ್ಷೇಪಿಸಿದ್ದರು.

ಆರೋಪಗಳ ಈ ಆಕ್ಷೇಪಣೆಯನ್ನು ನ್ಯಾಯಾಧೀಶ ಸಿದ್ಧಲಿಂಗ ಪ್ರಭು 2018ರ ಅಕ್ಟೋಬರ್ 12 ರಂದು ವಜಾ ಮಾಡಿದ್ದರು.ಈ ಆದೇಶವನ್ನು ಆರೋಪಿಗಳು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.ಇದೀಗ ಹೈಕೋರ್ಟ್ ಕೂಡಾ ಆರೋಪಿಗಳ ಮನವಿಯನ್ನು ತಿರಸ್ಕರಿಸಿದೆ.

ಎನ್‌ಐಎ ಪರ ಪಿ.ಪ್ರಸನ್ನ ಕುಮಾರ್ ಮತ್ತು ಆರೋಪಿಗಳ ಪರ ಬಾಲನ್ ವಾದ ಮಂಡಿಸಿದ್ದರು.

ಈ ಮೊದಲು ಆರೋಪಿಗಳು ಎನ್‌ಐಎ ತನಿಖೆ ನಡೆಸುವ ಅಧಿಕಾರ ಹೊಂದಿಲ್ಲ ಎಂದು ಆಕ್ಷೇಪಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ಪೀಠ ತಿರಸ್ಕರಿಸಿತ್ತು.

‘ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ. ಅಂತೆಯೇ ಸೂಕ್ಷ್ಮ ಪ್ರಕರಣ’ಎಂಬ ಕೇಂದ್ರ ಸರ್ಕಾರದ ವಾದವನ್ನು ಪುರಸ್ಕರಿಸಿತ್ತು.ಆರೋಪಿಗಳ ಬಗ್ಗೆ ಕೆಲವು ಗೋಪ್ಯ ದಾಖಲೆಗಳನ್ನು ನ್ಯಾಯಪೀಠಕ್ಕೆ ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿತ್ತು.

ಆರೋಪಿಗಳ ವಿರುದ್ಧ ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದಂತೆ ಅಕ್ರಮ ಕೂಟ ಕಾಯ್ದೆ–1967ರ ಅಡಿಯಲ್ಲೇ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.