ADVERTISEMENT

ಸರ್ಕಾರಿ ಭೂಮಿ ಒತ್ತುವರಿಯಲ್ಲಿ 7,436 ಎಕರೆ ಮಾತ್ರ ತೆರವು

ಬಾಕಿ ಜಾಗ ಎಲ್ಲಿ: ದೇಶಪಾಂಡೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:56 IST
Last Updated 21 ಜೂನ್ 2019, 19:56 IST
ಆರ್.ವಿ. ದೇಶಪಾಂಡೆ
ಆರ್.ವಿ. ದೇಶಪಾಂಡೆ   

ಬೆಂಗಳೂರು: ‘ನಗರ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯಲ್ಲಿ 7,436 ಎಕರೆ ಮಾತ್ರ ತೆರವುಗೊಳಿಸಲಾಗಿದ್ದು, ಉಳಿದ ಭೂಮಿ ಎಲ್ಲಿದೆ, ಏಕೆ ತೆರವಾಗಿಲ್ಲ’ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು,‘16,079 ಎಕರೆ ತೆರವಾಗಿದೆ ಎಂಬ ತಪ್ಪು ಮಾಹಿತಿಯನ್ನು ಈ ಹಿಂದಿನ ಸಭೆಯಲ್ಲಿ ನೀಡಿದ್ದು ಏಕೆ’ ಎಂದೂ ಅವರು ಕೇಳಿದರು.

‘ತೆರವು ಮಾಡಿರುವ ಜಾಗದ ರಕ್ಷಣೆ ಮುಖ್ಯ. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಿ. ಈ ಜಾಗವನ್ನು ಉದ್ಯಾನವನ, ಗ್ರಂಥಾಲಯ ಸೇರಿದಂತೆ ನಾಗರಿಕ ಸೌಲಭ್ಯಗಳಿಗೆ ಮೀಸಲಿಡಿ’ ಎಂದು ತಿಳಿಸಿದರು.

ADVERTISEMENT

‘ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣಗಳನ್ನು ಹೊರತುಪಡಿಸಿ ತೆರವಾಗದಿರುವ ಒತ್ತುವರಿ ಭೂಮಿಯನ್ನು ಇನ್ನೆರಡು ತಿಂಗಳಲ್ಲಿ ತೆರವುಗೊಳಿಸಿ ಮುಂದಿನ ಸಭೆಯಲ್ಲಿ ಮಾಹಿತಿ ನೀಡಬೇಕು’ ಎಂದು ತಾಕೀತು ಮಾಡಿದರು.

ಖಾತಾ ನೈಜತೆ ಗುರುತಿಸುವಿಕೆಗೆ ಸಂಬಂಧಿಸಿದಂತೆ 400ಕ್ಕೂ ಹೆಚ್ಚು ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿರುವ ಆನೇಕಲ್ ತಹಶೀಲ್ದಾರ್ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ವಾರದಲ್ಲಿ ಪ್ರಗತಿ ತೋರಿಸದಿದ್ದರೆ ಅವರ ವಿರುದ್ಧ ವರದಿ ನೀಡುವಂತೆ ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಹರಾಜು ಹಾಕಲಾಗಿರುವ ಜಮೀನುಗಳ ಸಂಪೂರ್ಣ ವಿವರವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿದರು.

ವೈಜ್ಞಾನಿಕ ವರದಿಗೆ ಪ್ರಸ್ತಾವನೆ
‘ಅಡ್ಡಾದಿಡ್ಡಿಯಾಗಿ ನಿರ್ಮಾಣ ಆಗುತ್ತಿರುವ ಲೇಔಟ್‌ಗಳಿಗೆ ಕಡಿವಾಣ ಹಾಕಬೇಕು. ಕಂದಾಯ ಭೂಮಿಯನ್ನು ಲೇಔಟ್ ಆಗಿ ಪರಿವರ್ತಿಸಲುಕನಿಷ್ಠ ಎಷ್ಟು ಜಾಗ ಇರಬೇಕು ಎಂಬುದರ ಬಗ್ಗೆ ನಗರ ಯೋಜನೆಗಳ ಇಲಾಖೆಯಿಂದ ವೈಜ್ಞಾನಿಕ ವರದಿ ಪಡೆಯಿರಿ’ ಎಂದು ಆರ್.ವಿ. ದೇಶಪಾಂಡೆ ಸೂಚಿಸಿದರು.

‘ಭೂ ಪರಿವರ್ತನೆಗೆ ಕನಿಷ್ಠ ಎಷ್ಟು ಜಾಗ ಇರಬೇಕು ಎಂಬುದರ ಬಗ್ಗೆ ಯಾವೊಬ್ಬ ತಹಶೀಲ್ದಾರ್‌ಗೂ ಗೊತ್ತಿಲ್ಲ. ಸ್ಥಳ ಪರಿಶೀಲನೆ ನಡೆಸದೆ ಕಣ್ಮುಚ್ಚಿಕೊಂಡು ಭೂ ಪರಿವರ್ತನೆಗೆ ಅನುಮತಿ ನೀಡುತ್ತಿದ್ದಾರೆ. ಹೀಗಾಗಿ ಪ್ರಸ್ತವಾನೆ ಸಲ್ಲಿಸಿ ವರದಿ ಪಡೆದುಕೊಳ್ಳಿ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.