ADVERTISEMENT

‘ಜನಸೇವಕ’ ಶೀಘ್ರದಲ್ಲೇ ಆರಂಭ: ಸುರೇಶ್ ಕುಮಾರ್

ಆಧಾರ್ ನೋಂದಣಿ, ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೂ ಅವಕಾಶ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 21:59 IST
Last Updated 9 ಜೂನ್ 2020, 21:59 IST
   

ಬೆಂಗಳೂರು: ‘ಆಧಾರ್ ನೋಂದಣಿ, ಎಪಿಎಲ್ ಕಾರ್ಡ್ ಮತ್ತು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸೇವೆಗಳನ್ನು ಸಕಾಲ ಯೋಜನೆಯ ‘ಜನಸೇವಕ’ ಅಡಿ ಒದಗಿಸಲು ಸಂಬಂಧಿಸಿದ ಇಲಾಖೆಗಳು ಸಹಮತ ವ್ಯಕ್ತಪಡಿಸಿವೆ. ಹೀಗಾಗಿ, ಈ ಸೇವೆಗಳನ್ನು ಶೀಘ್ರದಲ್ಲೇ ಈ ವ್ಯಾಪ್ತಿಗೆ ತರಲಾಗುವುದು’ ಎಂದು ಸಕಾಲ ಮಿಷನ್ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ಒದಗಿಸುವ ‘ಜನಸೇವಕ’ ಯೋಜನೆಯನ್ನು ಕೋವಿಡ್ 19 ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಸದ್ಯ ಈ ಯೋಜನೆ ರಾಜಾಜಿನಗರ, ಬೊಮ್ಮನಹಳ್ಳಿ, ಮಹದೇವಪುರ ಮತ್ತು ದಾಸರಹಳ್ಳಿ ಕ್ಷೇತ್ರಗಳಲ್ಲಿ ಜಾರಿಯಲ್ಲಿದೆ. ಆದಾಯ, ಜಾತಿ ಪ್ರಮಾಣಪತ್ರ, ಹಿರಿಯ ನಾಗರಿಕರ ಪಿಂಚಣಿ, ಕಾರ್ಮಿಕ, ಆರೋಗ್ಯ, ಪೊಲೀಸ್ ಸೇರಿದಂತೆ 50 ಸೇವೆಗಳನ್ನು ಇದರಡಿಯಲ್ಲಿ ಒದಗಿಸಲಾಗುತ್ತಿದೆ.

ಈ ಕುರಿತಂತೆ ಅಧಿಕಾರಿಗಳು ಹಾಗೂ ಬೆಂಗಳೂರು ವ್ಯಾಪ್ತಿಯ ಶಾಸಕರ ಜೊತೆ ಸೋಮವಾರ ಸುರೇಶ್‌ ಕುಮಾರ್‌ ಸಭೆ ನಡೆಸಿದರು.

ADVERTISEMENT

‘ಇತ್ತೀಚೆಗೆ ಎಲ್ಲ ವ್ಯವಹಾರಗಳಿಗೂ ಆಧಾರ್‌ ಅಗತ್ಯ. ಹಿರಿಯ ನಾಗರಿಕರು, ಅಸಹಾಯಕರು ಈ ಸೇವೆಗಳನ್ನು ಪಡೆಯಲು ಪರದಾಡುವಂತಾಗಿದೆ. ಇದನ್ನು ಪರಿಗಣಿಸಿ ಆಧಾರ್‌ ನೋಂದಣಿ ಮತ್ತು ತಿದ್ದುಪಡಿ ಸೇವೆಗಳನ್ನು ಕೂಡ ಜನಸೇವಕ ವ್ಯಾಪ್ತಿಗೆ ತರಲಾಗುತ್ತಿದೆ’ ಎಂದರು.

‘ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ವೃದ್ಧರು, ಅನಾರೋಗ್ಯ ಪೀಡಿತರು ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಎಲ್ಲ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಈ ಸೇವೆಗಳನ್ನು ಮತ್ತೆ ಆರಂಭಿಸಲುನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು.

‘ಈ ಸೇವೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶಾಸಕರು ಕೈಗೊಳ್ಳಬೇಕು’ ಎಂದೂಮನವಿ ಮಾಡಿದರು.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ದಾಸರಹಳ್ಳಿ ಶಾಸಕ ಎಂ. ಮಂಜುನಾಥ್ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.