ADVERTISEMENT

ಸಾಕು ತಾಯಿ ಕೊಂದು ಜೈಲಿಗೆ: ಹೊರಬಂದು ತಂದೆಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 16:56 IST
Last Updated 4 ಫೆಬ್ರುವರಿ 2023, 16:56 IST
   

ಬೆಂಗಳೂರು: ಸಾಕು ತಾಯಿ ಕೊಂದ ಆರೋಪದಡಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದು ಸಾಕು ತಂದೆಗೂ ಬೆದರಿಕೆಯೊಡ್ಡಿದ್ದ ಆರೋಪಿ ಉತ್ತಮ್ ಕುಮಾರ್ (27) ಎಂಬುವವರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಅಶ್ವತ್ಥನಗರ ನಿವಾಸಿ ಉತ್ತಮ್ ಕುಮಾರ್, ಮನೆ ಬಾಡಿಗೆ ಹಣ ಸಂಗ್ರಹ ವಿಚಾರವಾಗಿ ಸಾಕು ತಂದೆ ಮಂಜುನಾಥ್ ಅವರಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆಯೊಡ್ಡಿದ್ದ. ಸ್ಥಳಕ್ಕೆ ಹೋಗಿದ್ದ ಹೊಯ್ಸಳ ಗಸ್ತು ವಾಹನದ ಪೊಲೀಸರ ವಿರುದ್ಧವೂ ಹರಿಹಾಯ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಂಜುನಾಥ್ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ, ಉತ್ತಮ್ ಕುಮಾರ್‌ನನ್ನು ದತ್ತು ತೆಗೆದುಕೊಂಡಿದ್ದರು. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಆರೋಪಿ, ಸಾಕು ತಂದೆ–ತಾಯಿ ಇಬ್ಬರಿಗೂ ನಿತ್ಯವೂ ಕಿರುಕುಳ ನೀಡುತ್ತಿದ್ದ. 2018ರಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಸಾಕು ತಾಯಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ.’

ADVERTISEMENT

‘ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಉತ್ತಮ್‌ಕುಮಾರ್, ಒಂದೂವರೆ ವರ್ಷದ ಹಿಂದೆ ಜಾಮೀನು ಮೇಲೆ ಹೊರಬಂದಿದ್ದ. ಪುನಃ ತಂದೆಗೆ ಕಿರುಕುಳ ನೀಡಲಾರಂಭಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಂಜುನಾಥ್ ಅವರ ಹೆಸರಿನಲ್ಲಿ ಕೆಲ ಮನೆಗಳಿದ್ದು, ಅವುಗಳನ್ನು ಬಾಡಿಗೆಗೆ ನೀಡಲಾಗಿದೆ. ಮನೆ ಬಾಡಿಗೆಯ ಸಂಪೂರ್ಣ ಹಣವನ್ನು ತನಗೆ ನೀಡುವಂತೆ ಉತ್ತಮ್‌ಕುಮಾರ್ ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ತಂದೆಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದ. ಬಾಡಿಗೆದಾರ ಮನೋಹರ್ ಬಳಿ ಹೋಗಿದ್ದ ಆರೋಪಿ, ತನಗೇ ಬಾಡಿಗೆ ನೀಡುವಂತೆ ತಾಕೀತು ಮಾಡಿದ್ದ. ಅವರಿಗೂ ಮಾರಕಾಸ್ತ್ರ ತೋರಿಸಿದ್ದ. ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋದ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.