ಬೆಂಗಳೂರು: ನ್ಯಾಷನಲ್ ಎಜುಕೇಶನ್ ಫೌಂಡೇಷನ್(ಎನ್‌ಇಎಫ್) ಮತ್ತು ನ್ಯಾಷನಲ್ ಇಲ್‌ವ್ಯೂ ಪಬ್ಲಿಕ್ ಸ್ಕೂಲ್ (ಎನ್‌ಎಚ್‌ವಿಪಿಎಸ್) ಸಂಸ್ಥೆಗಳ 25 ವರ್ಷದ ಸಂಭ್ರಮಾಚರಣೆ ಅಂಗವಾಗಿ ಈಶಾ ಫೌಂಡೇಷನ್‌ನ ಸದ್ಗುರು (ಜಗ್ಗಿ ವಾಸುದೇವ) ಅವರೊಂದಿಗೆ ಸಂವಾದ ಆಯೋಜಿಸಲಾಗಿತ್ತು.
25ನೇ ವಾರ್ಷಿಕೋತ್ಸವದಲ್ಲಿ ಶಿಕ್ಷಕ ಸಮುದಾಯಕ್ಕೆ ಗೌರವ ಸಲ್ಲಿಸುವ ಮೂಲಕ ರಾಜ್ಯದಾದ್ಯಂತ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಚಿಂತನಶೀಲ ನಾಯಕರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ನಡೆಸಲಾಯಿತು.
‘ಕೃತಕ ಬುದ್ಧಿಮತ್ತೆ (ಎಐ) ಮತ್ತು ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ, ತಲೆಯಲ್ಲಿ ಸಂಗ್ರಹವಾಗಿರುವ ಮಾಹಿತಿ ಶೀಘ್ರದಲ್ಲೇ ತನ್ನ ಪ್ರಸ್ತುತತೆ ಕಳೆದುಕೊಳ್ಳುತ್ತದೆ. ನೀವು ಮಕ್ಕಳಿಗಿಂತ ಹೆಚ್ಚು ಸಂತೋಷವಾಗಿರಬೇಕು, ಹೆಚ್ಚು ಚುರುಕಾಗಿರಬೇಕು, ಹೆಚ್ಚು ಉತ್ಸಾಹದಿಂದ ಇರಬೇಕು. ಆಗ ಅವರು ನಿಮ್ಮಂತೆ ಆಗಲು ಅಪೇಕ್ಷಿಸುವರು. ನಿಮ್ಮ ತಲೆಯಲ್ಲಿ ಪುಸ್ತಕಗಳಿವೆ. ಆದರೆ, ಇನ್ನು ಮೂರರಿಂದ ಐದು ವರ್ಷಗಳಲ್ಲಿ, ತಲೆಯಲ್ಲಿರುವ ಪುಸ್ತಕಕ್ಕೆ ಏನೂ ಅರ್ಥ ಇರುವುದಿಲ್ಲ. ಆದ್ದರಿಂದ, ಅದಕ್ಕೂ ಮೊದಲು, ನೀವು ಮಕ್ಕಳಿಗೆ ಸ್ಫೂರ್ತಿಯ ಶಕ್ತಿಕೇಂದ್ರಗಳಾಗುವಂತಹ ರೀತಿಯಲ್ಲಿ ರೂಪಾಂತರಿಸಿಕೊಳ್ಳಬೇಕು’ ಎಂದು ಸದ್ಗುರು ಅವರು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಉಪ ಮುಖ್ಯಮಂತ್ರಿ ಮತ್ತು ಎನ್‌ಇಎಫ್‌ನ ಮಾಜಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ‘ಈ ಸಂಸ್ಥೆಯನ್ನು ಸಂಪೂರ್ಣವಾಗಿ ಶಿಕ್ಷಣದ ಮೇಲಿನ ಅಭಿರುಚಿಯಿಂದಲೇ ನಡೆಸಲಾಗುತ್ತಿದೆ. ಬೆಂಗಳೂರಿಗೆ ಹೆಮ್ಮೆ ತಂದ ಶಿಕ್ಷಕರಾದ ನಿಮ್ಮೆಲ್ಲರಿಗೂ ನಾನು ನಮಸ್ಕರಿಸುತ್ತೇನೆ’ ಎಂದರು.
ಎನ್‌ಇಎಫ್ ಟ್ರಸ್ಟಿ- ಕಾರ್ಯದರ್ಶಿ ಐಶ್ವರ್ಯಾ ಡಿ.ಕೆ.ಎಸ್. ಹೆಗ್ಡೆ ಮಾತನಾಡಿ, ‘ಸಂಸ್ಥೆಗಳನ್ನು ನಿರ್ಮಿಸುವುದಷ್ಟೇ ಅಲ್ಲ, ಮೌಲ್ಯಗಳು, ಧೈರ್ಯ ಮತ್ತು ಕರುಣೆಯಲ್ಲಿ ಬೇರೂರಿದ ಸಮುದಾಯವನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ. ಶಿಕ್ಷಣದ ಉದ್ದೇಶ ಕೇವಲ ಜ್ಞಾನಾರ್ಜನೆ ಅಲ್ಲ, ಮಾನವೀಯ ಮೌಲ್ಯಗಳನ್ನು ರೂಪಿಸುವುದಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.