ADVERTISEMENT

‘ವ್ಯವಸ್ಥಿತ ಜೀವನ ಸಿಗಲಿದೆ ಯೋಗದ ಫಲ’

ವಿದ್ವಾಂಸ ರಾ. ಗಣಪತಿ ಭಟ್ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 20:42 IST
Last Updated 9 ಜನವರಿ 2021, 20:42 IST

ಬೆಂಗಳೂರು: ‘ತಪ್ಪು ಕಲ್ಪನೆಯಿಂದಾಗಿ ಬಹುತೇಕರು ಕೈಕಾಲುಗಳನ್ನು ಆಡಿಸಿ, ಉಸಿರಾಟ ನಡೆಸುವ ಪ್ರಕ್ರಿಯೆಯನ್ನೇ ಯೋಗ ಅಂದುಕೊಂಡಿದ್ದಾರೆ. ವಾಸ್ತವದಲ್ಲಿ ಯೋಗದ ಫಲ ಸಿಗಬೇಕಾದರೆ ನಮ್ಮ ಜೀವನವನ್ನು ವ್ಯವಸ್ಥಿತಗೊಳಿಸುವ ಕೆಲಸವಾಗಬೇಕು’ ಎಂದು ವಿದ್ವಾಂಸ ರಾ. ಗಣಪತಿ ಭಟ್ ತಿಳಿಸಿದರು.

ಸಾಧನಾ ಕಾಲೇಜು ನಗರದಲ್ಲಿ ಶನಿವಾರ ಆಯೋಜಿಸಿದ ಸಂಸ್ಕೃತೋತ್ಸವದಲ್ಲಿ ‘ಯೋಗ: ಕಲ್ಪನೆ ಮತ್ತು ವಾಸ್ತವಿಕತೆ’ ವಿಷಯದ ಬಗ್ಗೆ ಮಾತನಾಡಿದರು. ‘ತಂತ್ರಜ್ಞಾನಗಳು ಇಲ್ಲದ ಸಮಯದಲ್ಲಿ ಋಷಿಗಳು ಖಗೋಳದ ಬಗ್ಗೆ ಅಧ್ಯಯನ‌ ನಡೆಸಿ, ಜ್ಯೋತಿಷ್ಯಶಾಸ್ತ್ರವನ್ನು ಪರಿಚಯಿಸಿದರು. ನಮ್ಮೊಳಗಿರುವ ಸೂಕ್ಷ್ಮ ರೋಗಗಳನ್ನು ಗುರುತಿಸುವ ಮೂಲಕ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಆವಿಷ್ಕಾರ ಮಾಡಿದರು. ಅವರಿಗೆ ಇವೆಲ್ಲವೂ ಸಾಧ್ಯವಾಗಿದ್ದು ಯೋಗಾಭ್ಯಾಸದಿಂದ. ಇಂತಹ ಯೋಗದಿಂದ ನಮ್ಮನ್ನು ನಾವು ತಿಳಿಯಬಹುದು’ ಎಂದರು.

‘ಯೋಗವೆಂದರೆ ಕೂಡುವಿಕೆ, ಹೊಂದಾಣಿಕೆ ಎಂದರ್ಥ. ಆದರೆ, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಸಂಬಂಧಗಳಲ್ಲಿ ಹೊಂದಾಣಿಕೆ ಕಡಿಮೆಯಾಗುತ್ತಿದೆ. ನಮ್ಮ ಮಾತು, ಮನಸ್ಸು ಹಾಗೂ ಕೃತಿಗಳ‌ ನಡುವೆಯೂ ವ್ಯತ್ಯಾಸ ಕಂಡುಬರುತ್ತಿದೆ. ಇವುಗಳನ್ನು ಮೊದಲು ಸರಿಪಡಿಸಿಕೊಂಡು ಜೀವನ ಸಾಗಿಸಬೇಕಿದೆ. ಇಲ್ಲವಾದಲ್ಲಿ ಸಿಗುವ ಫಲ ಕೂಡ ದೂರವಾಗುತ್ತದೆ. ಪತಂಜಲಿ ಮಹರ್ಷಿಗಳು ಆಸನಗಳ ಬಗ್ಗೆ ಹೇಳುವುದಕ್ಕೂ ಮುಂಚೆ ಯಮ-ನಿಯಮಗಳ ಬಗ್ಗೆ ಹೇಳಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಪತ್ರಕರ್ತ ವಿಕಾಸ್ ನೇಗಿಲೋಣಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿರಾಜ್ ಉರ್ ರಹಮಾನ್, ಉಪಪ್ರಾಂಶುಪಾಲ ಡಾ.ಅಜಯ್, ಪ್ರಾಧ್ಯಾಪಕರಾದ ಪ್ರೊ. ಕೃಷ್ಣಾನಂದಶರ್ಮಾ, ಪ್ರೊ. ಸೌಮ್ಯಾ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.