ADVERTISEMENT

ಕನ್ನಡದಿಂದ ರೂಪುಗೊಂಡ ನನ್ನ ವ್ಯಕ್ತಿತ್ವ–ಬರೆವಣಿಗೆ: ಸಂವಾದದಲ್ಲಿ ಬಾನು ಮುಷ್ತಾಕ್

ಕರ್ನಾಟಕ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಬಾನು ಮುಷ್ತಾಕ್ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 14:43 IST
Last Updated 5 ಆಗಸ್ಟ್ 2025, 14:43 IST
ಕಾರ್ಯಕ್ರಮದಲ್ಲಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಲೇಖಕಿ ಪ್ರತಿಭಾ ನಂದಕುಮಾರ್, ಸಾಹಿತಿ ಹಂಪ ನಾಗರಾಜಯ್ಯ, ವಕೀಲ ಸಿ.ಎಚ್. ಹನುಮಂತರಾಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಲೇಖಕಿಯರಾದ ಡಾ. ವಸುಂಧರಾ ಭೂಪತಿ ಹಾಗೂ ಸುಜಾತಾ ಎಚ್.ಆರ್. ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಲೇಖಕಿ ಪ್ರತಿಭಾ ನಂದಕುಮಾರ್, ಸಾಹಿತಿ ಹಂಪ ನಾಗರಾಜಯ್ಯ, ವಕೀಲ ಸಿ.ಎಚ್. ಹನುಮಂತರಾಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಲೇಖಕಿಯರಾದ ಡಾ. ವಸುಂಧರಾ ಭೂಪತಿ ಹಾಗೂ ಸುಜಾತಾ ಎಚ್.ಆರ್. ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಉರ್ದು ನನ್ನ ಮಾತೃಭಾಷೆಯಾದರೂ ಕನ್ನಡ ಭಾಷೆಯ ಕಲಿಕೆ ನನ್ನ ಮೇಲೆ ಅಗಾಧ ಪರಿಣಾಮ ಬೀರಿತು. ಈ ನಾಡಿನ ಸಾಂಸ್ಕೃತಿಕ ಲೋಕ ಮತ್ತು ಕನ್ನಡದ ಪ್ರಭಾವದಿಂದಲೇ ವ್ಯಕ್ತಿತ್ವ ಹಾಗೂ ಬರೆವಣಿಗೆ ರೂಪುಗೊಳ್ಳಲು ಸಾಧ್ಯವಾಯಿತು’ ಎಂದು ‘ಅಂತರರಾಷ್ಟ್ರೀಯ ಬುಕರ್‌ ಪ್ರಶಸ್ತಿ’ ವಿಜೇತ ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು.

ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಬುಕರ್ ಬಾನು ಮುಷ್ತಾಕ್’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 

‘ನನಗೆ ಸಿಕ್ಕ ಮನ್ನಣೆ ವೈಯಕ್ತಿಕವಾಗಿರದೆ ಸಾಮೂಹಿಕವಾಗಿದೆ. ಇಲ್ಲಿನ ನೆಲ, ಜನ, ಚಳವಳಿ, ಸೈದ್ಧಾಂತಿಕ ಸ್ಪಷ್ಟತೆ ಹಾಗೂ ಸಾಹಿತ್ಯಿಕ ವಾತಾವರಣ ನನ್ನನ್ನು ರೂಪಿಸಿದೆ. ಉರ್ದು ಭಾಷಯನ್ನಷ್ಟೇ ಓದಿದ್ದರೆ ಬಹುಶಃ ನನ್ನ ವ್ಯಕ್ತಿತ್ವ ಈ ರೀತಿ ರೂಪುಗೊಳ್ಳಲು ಹಾಗೂ ಬರೆಯಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದರು. 

ADVERTISEMENT

‘ಕೋರ್ಟ್‌ ಸಭಾಂಗಣದಲ್ಲಿ ಕುಳಿತಾಗ ಕವನಗಳು ನನ್ನಿಂದ ಹೊರಹೊಮ್ಮುತ್ತಿದ್ದವು. ಅವನ್ನು ಆಗಲೇ ಬರೆದು ಕೋಟಿನ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದೆ. ಕಕ್ಷಿದಾರರು ಸಿಕ್ಕಾಗ ಅದರ ಹಿಂಭಾಗದಲ್ಲಿ ದಿನಾಂಕ, ಮಾಹಿತಿ ಬರೆದುಕೊಡುತ್ತಿದ್ದೆ. ಇಂತಹ ಅವ್ಯವಸ್ಥೆಯ ಸಾಹಿತ್ಯ ಕೃಷಿ ನನ್ನದಾಗಿತ್ತು’ ಎಂದು ಸ್ಮರಿಸಿಕೊಂಡರು. 

ಪತ್ರಕರ್ತ ಜಿ.ಎನ್. ಮೋಹನ್ ಸಂವಾದ ನಡೆಸಿಕೊಟ್ಟರು. ಲೇಖಕಿ ಎಂ.ಎಸ್.ಆಶಾದೇವಿ, ಕವಿ ಸುಬ್ಬು ಹೊಲೆಯಾರ್, ನಾಟಕಕಾರ ಕೆ.ವೈ. ನಾರಾಯಣಸ್ವಾಮಿ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡೊಮಿನಿಕ್ ಡಿ., ಸಾಮಾಜಿಕ ಕಾರ್ಯಕರ್ತೆ ನಜ್ಮಾ ಚಿಕ್ಕನೇರಳೆ, ಕರ್ನಾಟಕ ಲೇಖಕಿಯ ಸಂಘದ ಖಜಾಂಚಿ ಮಂಜುಳಾ ಶಿವಾನಂದ ಸಂವಾದದಲ್ಲಿ ಪಾಲ್ಗೊಂಡಿದ್ದರು.

‘ಮೊಹಲ್ಲಾದಾಚೆಗೂ ವಿಸ್ತರಿಸಿದ ಓದುಗರು’

‘ಮೊದಮೊದಲು ನನ್ನ ಮೊಹಲ್ಲಾದವರು ನನ್ನ ಸಮುದಾಯದವರು ಮತ್ತು ವಿದ್ವಾಂಸರು ನನ್ನ ಕಥೆಗಳನ್ನು ಓದುತ್ತಿದ್ದರು. ಈಗ ಎಲ್ಲರೂ ಆ ಕಥೆಗಳನ್ನು ಓದುತ್ತಿದ್ದಾರೆ’ ಎಂದು ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು. ತಮ್ಮ ‘ಎದೆಯ ಹಣತೆ’ ಕೃತಿಗೆ ವ್ಯಕ್ತವಾದ ಸ್ಪಂದನೆ ಬಗ್ಗೆ ಮಾತನಾಡಿದ ಅವರು‘ನಾನು ಸೃಷ್ಟಿಸಿದ ಪಾತ್ರಗಳ ಜತೆಗೆ ಸಂಬಂಧವನ್ನೂ ಬೆಳೆಸಿಕೊಳ್ಳುತ್ತಿದ್ದಾರೆ. ನಮ್ಮ ಸಂದೇಶ ಓದುಗರಲ್ಲಿ ಬೆಳೆಯಬೇಕು. ಆ ಪ್ರಕ್ರಿಯೆ ಈಗ ಆಗುತ್ತಿದೆ’ ಎಂದರು. ‘ಸಾಮಾಜಿಕ ವಿರೋಧ ಅವಮಾನ ಶಂಕೆಯನ್ನು ಎತ್ತಿ ತೋರಿಸುವ ಕ್ರಿಯೆ ಮಾಡದಿದ್ದರೆ ಅದು ತಪ್ಪು ಅಂತ ತಿಳಿಯುವುದಾದರೂ ಹೇಗೆ? ಬೇರೆಯವರ ನೋವನ್ನು ಅನುಭವಿಸುವ ಸಂವೇದನಾಶೀಲತೆ ಇಲ್ಲದಿದ್ದರೆ ನಾವು ನಿಜವಾದ ಲೇಖಕರಾಗಲು ಸಾಧ್ಯವಿಲ್ಲ. ನಮ್ಮ ಬರವಣಿಗೆ ಮೂಲಕ ಈ ನೋವನ್ನು ಹೇಳಲೇಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.