ADVERTISEMENT

ಮೆಟ್ರೊ ಮಾರ್ಗಕ್ಕೆ ಮರಗಳ ಬಲಿ ಬೇಡ: ಹೈಕೋರ್ಟ್‌ ನಿ.ನ್ಯಾಯಮೂರ್ತಿ ಸಲ್ಡಾನಾ ಒತ್ತಾಯ

ಬಿಎಂಆರ್‌ಸಿಎಲ್‌ಗೆ ಪತ್ರ

​ಪ್ರಜಾವಾಣಿ ವಾರ್ತೆ
Published 28 ಮೇ 2021, 22:10 IST
Last Updated 28 ಮೇ 2021, 22:10 IST
   

ಬೆಂಗಳೂರು: ‘ನಮ್ಮ ಮೆಟ್ರೊ’ ಮಾರ್ಗ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯುವ ಕಾರ್ಯವನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಉಳಿದ ಮಾರ್ಗಗಳನ್ನು ನೆಲದಡಿಯಲ್ಲಿಯೇ ನಿರ್ಮಾಣ ಮಾಡಬೇಕು‘ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಎಫ್. ಸಲ್ಡಾನಾ ಅವರು ಬೆಂಗಳೂರು ಮೆಟ್ರೊ ರೈಲು ನಿಗಮವನ್ನು (ಬಿಎಂಆರ್‌ಸಿಎಲ್‌) ಒತ್ತಾಯಿಸಿದ್ದಾರೆ.

ಈ ಕುರಿತು ನಿಗಮದ ನಿರ್ದೇಶಕ (ಯೋಜನೆ) ಡಿ. ರಾಧಾಕೃಷ್ಣ ರೆಡ್ಡಿ ಅವರಿಗೆ ಪತ್ರ ಬರೆದಿರುವ ಸಲ್ಡಾನಾ, ಮುಂಬೈನಲ್ಲಿ ಮೆಟ್ರೊ ಕಾರ್‌ ಶೆಡ್‌ ನಿರ್ಮಾಣ ಕಾರ್ಯದಿಂದ ಪರಿಸರದ ಮೇಲೆ ಆದ ಹಾನಿಯನ್ನು ಅವರು ಉದಾಹರಿಸಿದ್ದಾರೆ. ಸಲ್ಡಾನಾ ಅವರು ಬಾಂಬೆ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಯೂ ಹೌದು.

’ಮರಗಳನ್ನು ಕಡಿದು ಮೆಟ್ರೊ ಕಾರ್ ಶೆಡ್ ನಿರ್ಮಾಣ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರೂ ಅಂದಿನ ಬಿಜೆಪಿ ಸರ್ಕಾರ ಮಾತು ಕೇಳಲಿಲ್ಲ. ಈಗ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವೂ ಇದೇ ಕಾರ್ಯಕ್ಕೆ ಮುಂದಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‌‘ಬೆಂಗಳೂರಿನಲ್ಲಿಯೂ ಇದೇ ಪರಿಸ್ಥಿತಿ ಉದ್ಭವವಾಗುವುದು ಬೇಡ. ಮುಂದೆ ಯಾವುದೇ ಮಾರ್ಗ ನಿರ್ಮಾಣ ಮಾಡುವುದಿದ್ದರೂ ಅದು ನೆಲದಡಿ ಅಥವಾ ಸುರಂಗ ಮಾರ್ಗದ್ದಾಗಿರಲಿ. ಭೂಮಿಯ ಮೇಲೆ ಇಂತಹ ಯೋಜನೆಗಳು ಜಾರಿ ಆಗಬಾರದು’ ಎಂದೂ ಸಲ್ಡಾನಾ ಸಲಹೆ ನೀಡಿದ್ದಾರೆ.

‘ಮೆಟ್ರೊ ಮಾರ್ಗಕ್ಕೆ ಐದು ಸಾವಿರ ಮರಕ್ಕೆ ಕೊಡಲಿಯೇಟು?’
ಹೊರವರ್ತುಲ ರಸ್ತೆ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ (ಕೆಐಎ) ಮೆಟ್ರೊ ಮಾರ್ಗ ನಿರ್ಮಾಣಕ್ಕೆ 4,789 ಮರಗಳಿಗೆ ಕೊಡಲಿಯೇಟು ಬೀಳಲಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಈ ಮೊದಲು ಉದ್ದೇಶಿಸಿದ್ದ ಬಸ್‌ ಆದ್ಯತಾ ಮಾರ್ಗದಲ್ಲಿಯೇ ಈ ಮೆಟ್ರೊ ಮಾರ್ಗವೂ ನಿರ್ಮಾಣವಾಗಲಿದೆ. ಬಸ್‌ ಆದ್ಯತಾ ಪಥದ ಮಧ್ಯದ ಭಾಗದಲ್ಲಿ ಅಂದರೆ ಮೀಡಿಯನ್‌ನಲ್ಲಿರುವ ಮರಗಳು ಈ ಯೋಜನೆಗೆ ಬಲಿಯಾಗಲಿವೆ. ಇವು ಬಹುತೇಕ ಸಣ್ಣ ಮರಗಳಾಗಿದ್ದು, ಕಡಿಯಬೇಕಾದ ಮರಗಳನ್ನು ಬಿಎಂಆರ್‌ಸಿಎಲ್ ಈಗಾಗಲೇ ಗುರುತಿಸಿದೆ ಎನ್ನಲಾಗಿದೆ. ಆದರೆ, ಬಿಬಿಎಂಪಿಯ ಅರಣ್ಯ ವಿಭಾಗದಿಂದ ಅನುಮತಿ ಸಿಗಬೇಕಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.