ADVERTISEMENT

ಬೆಂಗಳೂರು: ಮಾರಾಟಕ್ಕೆ ಕೊಟ್ಟಿದ್ದ ₹8 ಕೋಟಿ ಮೌಲ್ಯದ ಚಿನ್ನದೊಂದಿಗೆ ಪರಾರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 16:07 IST
Last Updated 18 ಜನವರಿ 2025, 16:07 IST
<div class="paragraphs"><p>ಚಿನ್ನಾಭರಣ (ಪ್ರಾತಿನಿಧಿಕ ಚಿತ್ರ)</p></div>

ಚಿನ್ನಾಭರಣ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಕೆಲಸ ಮಾಡುತ್ತಿದ್ದ ಆಭರಣ ಅಂಗಡಿ ಹಾಗೂ ಪರಿಚಿತರ ಅಂಗಡಿಗಳ ಮಾಲೀಕರು ಮಾರಾಟ ಮಾಡಲು ನೀಡಿದ್ದ ₹8 ಕೋಟಿ ಮೌಲ್ಯದ ಸುಮಾರು 9 ಕೆ.ಜಿ 462 ಗ್ರಾಂ ತೂಕದ ಚಿನ್ನಾಭರಣದೊಂದಿಗೆ ಮಾರಾಟ ಪ್ರತಿನಿಧಿ ಪರಾರಿಯಾಗಿರುವ ಘಟನೆ ನಡೆದಿದೆ.

ವಿಕ್ರಮ್ ಜ್ಯುವೆಲರ್ಸ್ ಮಾಲೀಕ ವಿಕ್ರಮ್ ಕಾರ್ಯ ಅವರ ದೂರಿನ ಮೇರೆಗೆ ಹಲಸೂರು ಗೇಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. 

ADVERTISEMENT

ವಿಕ್ರಮ್ ಅವರ ಅಂಗಡಿಯಲ್ಲಿ ಆರೋಪಿ, ಚೆನ್ನೈನ ನರೇಶ್‌ ಶರ್ಮಾ ಅವರು ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದರು. ಈತನ ಮೂಲಕ ವಿಕ್ರಮ್ ಅವರು ಹಲವು ಗ್ರಾಹಕರಿಗೆ ಮತ್ತು ಅಂಗಡಿಗಳಿಗೆ ಚಿನ್ನಾಭರಣ ಮಾರಾಟ ಮಾಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಒಂದು ವಾರದ ಹಿಂದೆ ವಿಕ್ರಮ್‌ ಅವರು ಬೇರೆ ಅಂಗಡಿಗಳಿಂದ ಸುಮಾರು 7 ಕೆ.ಜಿ. 732 ಗ್ರಾಂ ತೂಕದ ಚಿನ್ನ ಖರೀದಿಸಿ ನರಶ್‌ ಶರ್ಮಾಗೆ ನೀಡಿ ಮಾರಾಟ ಮಾಡಿಕೊಂಡು ಬರುವಂತೆ ಜನವರಿಗೆ 2 ರಂದು ಸೂಚಿಸಿದ್ದರು. ಚಿನ್ನಾಭರಣ ತೆಗೆದುಕೊಂಡು ಕೊಯಮತ್ತೂರಿಗೆ ಹೋಗಿ ಕೆಲ ಆಭರಣ ಮಾರಾಟ ಮಾಡಿ ನರೇಶ್ ವಾಪಸ್ ಬಂದಿದ್ದ. ಮತ್ತೆ ಜನವರಿ 8ರಂದು ಉಳಿದ ಚಿನ್ನಾಭರಣ ಮಾರಾಟ ಮಾಡಲು ಹೊರ ರಾಜ್ಯಕ್ಕೆ ಹೋಗಿದ್ದ. ಬಳಿಕ ಆತನ ಮೊಬೈಲ್ ಸ್ವಿಚ್ಡ್‌ಆಫ್ ಆಗಿದ್ದು ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಹೇಳಿದ್ದಾರೆ.

‘ವಿಕ್ರಮ್ ಅವರು ನರೇಶ್ ಬಗ್ಗೆ ಪರಿಚಿತರ ಅಂಗಡಿಗಳಲ್ಲಿ ವಿಚಾರಿಸಿದಾಗ, ರಬಿ ಶಂಕರ್ ಪಾಲ್ ಅವರ ಪಾಲ್‌ಗೋಲ್ಡ್‌ ಅಂಗಡಿಯಿಂದ ಜನವರಿ 3 ರಂದು 676 ಗ್ರಾಂ ಚಿನ್ನ ಹಾಗೂ ಜನವರಿ 5 ರಂದು ಸುಮಾರು 1 ಕೆ.ಜಿ. 53 ಗ್ರಾಂ ಚಿನ್ನ ಮಾರಾಟ ಮಾಡಲು ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಆರೋಪಿ ಒಟ್ಟಾರೆ ₹ 8 ಕೋಟಿ ಮೌಲ್ಯದ ಸುಮಾರು 9 ಕೆ.ಜಿ. 462 ಗ್ರಾಂ ತೂಕದ ಆಭರಣದೊಂದಿಗೆ ಪರಾರಿಯಾಗಿರುವ ಬಗ್ಗೆ ವಿಕ್ರಮ್ ದೂರು ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಆರೋಪಿ ಪತ್ತೆಗೆ ಪೊಲೀಸರ ಎರಡು ತಂಡಗಳು ರಚಿಸಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ. ಆರೋಪಿಯು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಲ್ಲಿಗೆ ಒಂದು ತಂಡ ತೆರಳಿದೆ.

ಗಮನ ಬೇರೆಡೆ ಸೆಳೆದು ₹ 23 ಲಕ್ಷ ಚಿನ್ನ ಕಳವು

ಚಿನ್ನಾಭರಣ ವಿನ್ಯಾಸ ಕೆಲಸ ಮಾಡುವ ವ್ಯಕ್ತಿಯ ಗಮನ ಬೇರೆಡೆ ಸೆಳೆದು ₹23 ಲಕ್ಷ ಮೌಲ್ಯದ ಆಭರಣ ಕಳ್ಳತನ ಮಾಡಲಾಗಿದೆ.

ಅಶೋಕ್ ನಗರದ ನಿವಾಸಿ ವಸಂತ್ ಕುಮಾರ್ ಅವರ ದೂರಿನ ಮೇರೆಗೆ ಹಲಸೂರು ಗೇಟ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಸಹೋದರರಾದ ಸುಧೀರ್ ಕುಮಾರ್ ಮತ್ತು ವಸಂತ್ ಕುಮಾರ್ ಅವರು ಸಿ.ಟಿ.ಸ್ಟ್ರೀಟ್‌ನಲ್ಲಿ ಮೆಲೇಚಾ ಡೈಮಂಡ್ಸ್ ಅಂಗಡಿಗೆ ಚಿನ್ನಾಭರಣ ವಿನ್ಯಾಸ ಮಾಡಿಕೊಡುತ್ತಿದ್ದರು. ಕೆಲ ದಿನಗಳ ಹಿಂದೆ ಪ್ರಕಾಶ್ ಜ್ಯುವೆಲ್ಲರಿ ಮಾಲೀಕರು ಇವರಿಗೆ 115.64 ಗ್ರಾಂ ಹಾಗೂ 85 ಗ್ರಾಂ ತೂಕದ ಚಿನ್ನದ ಆಭರಣವನ್ನು ವಿನ್ಯಾಸ ಮಾಡಿಕೊಡುವಂತೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅದರಂತೆ ಅಂಗಡಿಯಲ್ಲಿ ಡಿಸೈನ್ ಮಾಡಿರುವ 94 ಗ್ರಾಂ ಮತ್ತು 27 ಗ್ರಾಂ ಚಿನ್ನದ ಆಭರಣ ಸೇರಿ ಒಟ್ಟು 314 ಗ್ರಾಂ ಆಭರಣವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಪ್ರಕಾಶ್ ಜ್ಯುವೆಲ್ಲರಿ ಅಂಗಡಿಗೆ ಕೊಡಲು ಹೊರಟಿದ್ದರು. ಚಿನ್ನಾಭರಣದ ಬ್ಯಾಗ್ ಅನ್ನು ವಸಂತ್ ಕುಮಾರ್ ದ್ವಿಚಕ್ರ ವಾಹನ ಮೇಲೆ ಇಟ್ಟಿದ್ದರು. ಆ ವೇಳೆ ಮೂವರು ಇವರ ಬಳಿ ಬಂದು ವಿಳಾಸ ಕೇಳುವ ನೆಪದಲ್ಲಿ ಗಮನ ವನ್ನು ಬೇರೆಡೆ ಸೆಳೆದು ಬ್ಯಾಗ್‌ನಲ್ಲಿದ್ದ 314 ಗ್ರಾಂ ಚಿನ್ನ ಲಪಟಾಯಿಸಿದ್ದರು ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.