- ಪ್ರಜಾವಾಣಿ ಕಡತ ಚಿತ್ರ
ಬೆಂಗಳೂರು: ‘ಜಾಮೀನು ಮೇಲೆ ಜೈಲಿನಿಂದ ಹೊರಬರುವ ವ್ಯಕ್ತಿಗೂ ಸೇಬಿನ ಹಾರ ಹಾಕಿ ಬರಮಾಡಿಕೊಳ್ಳುವ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಅಧಿಕಾರದಲ್ಲಿರುವವರ ಸ್ವಾರ್ಥ ಮತ್ತು ದುರಾಸೆಯು ಭ್ರಷ್ಟಾಚಾರವನ್ನು ಪೋಷಿಸುತ್ತಿದೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ, ಕೊಬಾಲ್ಟ್ ಕಲೆ ಮತ್ತು ಸಂಗೀತ ವೇದಿಕೆ ಹಾಗೂ ಮೈಸೂರಿನ ಮಹಿಮಾ ಪ್ರಕಾಶನ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ.ನಾ. ಭಟ್ಟ ಅವರ ‘ಸಮ್ಮುಖ’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು.
‘ಅಪರಾಧಗಳು ಹಾಗೂ ಭ್ರಷ್ಟಾಚಾರವನ್ನು ಹತ್ತಿರದಿಂದ ಕಂಡಿದ್ದೇನೆ. ಜೀಪ್ ಹಗರಣ, ಬೋಫೋರ್ಸ್ ಹಗರಣ, ಕಾಮನ್‌ವೆಲ್ತ್ ಹಗರಣ, 2ಜಿ ಹಗರಣ, ಕಲ್ಲಿದ್ದಲು ಹಗರಣ ಸೇರಿ ವಿವಿಧ ಹಗರಣಗಳಲ್ಲಿ ಅಧಿಕಾರದಲ್ಲಿ ಇದ್ದವರು ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆದರು. ಈ ಹಗರಣಗಳ ಒಟ್ಟು ಮೊತ್ತವು ದೇಶದ ವಾರ್ಷಿಕ ಬಜೆಟ್ ಗಾತ್ರಕ್ಕಿಂತ ದೊಡ್ಡದಾಗಲಿದೆ. ರಾಜಕೀಯದಲ್ಲಿ ಆಡಳಿತದಲ್ಲಿರುವವರ ಸ್ವಾರ್ಥ-ದುರಾಸೆ ಇವುಗಳಿಗೆಲ್ಲಾ ಕಾರಣ’ ಎಂದು ಹೇಳಿದರು.
‘ಎಲ್ಲ ಕಾಯಿಲೆಗಳಿಗೂ ಮದ್ದಿದೆ. ಆದರೆ, ದುರಾಸೆಗೆ ಇಲ್ಲವಾಗಿದೆ. ಇಂತಹ ಸಮಾಜ ಬದಲಾಗಬೇಕಾದರೆ ಜೀವನದಲ್ಲಿ ತೃಪ್ತಿ ಮತ್ತು ಮಾನವೀಯ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು’ ಎಂದರು.
ಪುಸ್ತಕದ ಬಗ್ಗೆ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಶುಭಾ ಮರವಂತೆ, ‘ಪುಸ್ತಕದಲ್ಲಿ ವ್ಯಕ್ತಿಚಿತ್ರ ಮತ್ತು ತತ್ವಗಳಿವೆ. ರಾಮಾಯಣ ಮತ್ತು ಮಹಾಭಾರತದ ಬಗ್ಗೆ ವಿಶಾಲ ನೋಟವನ್ನು ಕಟ್ಟಿಕೊಡಲಾಗಿದೆ. ಆಳವಾದ ಅಧ್ಯಯನ ಕೈಗೊಂಡು, ಸಂಸ್ಕೃತದ ಜ್ಞಾನವನ್ನು ಸಾಮಾನ್ಯರಿಗೂ ಅರ್ಥವಾಗುವ ರೀತಿ ವಿಸ್ತರಿಸಿ ಬರೆಯಲಾಗಿದೆ. ಆಧುನಿಕತೆಯ ಈ ಸಂದರ್ಭದಲ್ಲಿ ಮೌಲ್ಯಗಳನ್ನು ಮರುಸ್ಥಾಪಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರಕಲಾವಿದ ಗಣಪತಿ ಎಸ್. ಹೆಗಡೆ, ಪ್ರಕಾಶಕ ಕೆ.ವಿ. ಶ್ರೀನಿವಾಸ ಹಾಗೂ ಉದ್ಯಮಿ ಪೊಲ್ಯ ಉಮೇಶ ಡಿ. ಶೆಟ್ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.