
ಬೆಂಗಳೂರು: ಸಿ.ಸೋಮಶೇಖರ್–ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನವು ಜೀವಮಾನದ ಸಾಧನೆಗಾಗಿ ನೀಡುವ ‘ಸಂಸ್ಕೃತಿ ಸಂಗಮ‘ ಪ್ರಶಸ್ತಿಗೆ 2025ನೇ ಸಾಲಿನಲ್ಲಿ ಒಂದು ಸಂಸ್ಥೆ ಮತ್ತು ನಾಲ್ವರು ಸಾಧಕರನ್ನು ಆಯ್ಕೆ ಮಾಡಿದೆ.
ಜಾನಪದ ಸಾಹಿತ್ಯ ಪ್ರಶಸ್ತಿಗೆ ರಾಮನಗರದ ಕರ್ನಾಟಕ ಜಾನಪದ ಪರಿಷತ್ತನ್ನು (ಜಾನಪದ ಲೋಕ) ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಸಿ. ಸೋಮಶೇಖರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಚನ ಸಾಹಿತ್ಯ ಪ್ರಶಸ್ತಿಗೆ ಬರಹಗಾರ ರಂಜಾನ್ ದರ್ಗಾ, ದಾಸ ಸಾಹಿತ್ಯ ಪ್ರಶಸ್ತಿಗೆ ಲೇಖಕ ಕಾ.ತ. ಚಿಕ್ಕಣ್ಣ, ಸಾಂಸ್ಕೃತಿಕ ಸಂಘಟನೆ ಪ್ರಶಸ್ತಿಗೆ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ, ಸಂಗೀತ ಪ್ರಶಸ್ತಿಗೆ ಗಾಯಕಿ ಕಸ್ತೂರಿ ಶಂಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಗಾಂಧಿ ಭವನದಲ್ಲಿ ಅ.31ರಂದು ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡುವರು. ಗೃಹ ಸಚಿವ ಜಿ. ಪರಮೇಶ್ವರ ಕಾರ್ಯಕ್ರಮ ಉದ್ಘಾಟಿಸಿ, ‘ಸಂಸ್ಕೃತಿ ಸಂಗಮ’ ವಿಶೇಷ ಸಂಚಿಕೆ ಬಿಡುಗಡೆ ಮಾಡುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
‘ಕಸಾಪಕ್ಕೆ ಸ್ಪರ್ಧೆ’
‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇನೆ’ ಎಂದು ಸಿ. ಸೋಮಶೇಖರ್ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.