
ಬೆಂಗಳೂರು: ಸರಕು ಸಾಗಣೆ ವಾಹನದಲ್ಲಿ ಈರುಳ್ಳಿ ಚೀಲಗಳ ನಡುವೆ ಶ್ರೀಗಂಧದ ತುಂಡುಗಳನ್ನು ಬಚ್ಚಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿದ್ಧಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಕರ್ನೂಲ್ ಮೂಲದ ಶೇಖ್ ಅಬ್ದುಲ್ ಕಲಾಂ (47) ಮತ್ತು ಶೇಖ್ ಶಾರೂಕ್(31) ಎಂಬುವರನ್ನು ಬಂಧಿಸಿ, ₹1.12 ಕೋಟಿ ಮೌಲ್ಯದ 750 ಕೆ.ಜಿ. ತೂಕದ 258 ಶ್ರೀಗಂಧದ ತುಂಡುಗಳು, ಸರಕು ಸಾಗಣೆ ವಾಹನ ಹಾಗೂ ಕಾರನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ಅಕ್ಟೋಬರ್ 15ರ ಮಧ್ಯರಾತ್ರಿ 12.30ರ ಸೋಮೇಶ್ವರನಗರ ಆರ್ಚ್ ಬಳಿ ಗೂಡ್ಸ್ ವಾಹನ ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು, ವಾಹನ ತಪಾಸಣೆ ನಡೆಸಿದಾಗ ಈರುಳ್ಳಿ ತುಂಬಿದ್ದ ಚೀಲದಲ್ಲಿ ಶ್ರೀಗಂಧದ ತುಂಡುಗಳು ಪತ್ತೆಯಾದವು.
ಆಂಧ್ರಪ್ರದೇಶ ಕರ್ನೂಲ್‌ನಿಂದ ಆರೋಪಿಗಳು ಶ್ರೀಗಂಧದ ತುಂಡುಗಳನ್ನು ನಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದರು. 258 ತುಂಡುಗಳನ್ನು 18 ಚೀಲಗಳಿಗೆ ತುಂಬಿದ್ದರು. ಶೇಖ್ ಶಾರೂಕ್ ಈ ಲಘು ಸರಕು ಸಾಗಣೆ ವಾಹನ ಚಾಲನೆ ಮಾಡಿಕೊಂಡು ಬಂದಿದ್ದು, ಈ ವಾಹನದ ಹಿಂದೆ ಉಳಿದ ಮೂವರು ಆರೋಪಿಗಳು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು.
ಶ್ರೀಗಂಧದ ತುಂಡುಗಳನ್ನು ನಗರದ ಡೀಲರ್‌ಗೆ ತಲುಪಿಸಲು ಬಂದಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಈ ಕಳ್ಳಸಾಗಣೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.