ರಾಜರಾಜೇಶ್ವರಿನಗರ: ‘ಬಿಬಿಎಂಪಿ ವ್ಯಾಪ್ತಿಯಲ್ಲಿರುವಂತೆಯೇ ಯಶವಂತಪುರ ಕ್ಷೇತ್ರದ ಗ್ರಾಮೀಣ ಭಾಗದಲ್ಲಿಯೂ ಒಳಚರಂಡಿ, ಹಲವು ಭಾಗಗಳಿಗೂ ಕಾವೇರಿ ನೀರು ಪೂರೈಕೆ ಸೇರಿದಂತೆ ಹಲವು ಮೂಲಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ‘ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಕೊಡಿಗೆಹಳ್ಳಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿ, ಸರ್ಕಾರಿ ಶಾಲೆಗಳ ಕಟ್ಟಡ, ಅಂಗನವಾಡಿ ಕಟ್ಟಡ ಲೋಕಾರ್ಪಣೆ ನೆರವೇರಿಸಿ, ಶಾಲಾ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಅವರು ಮಾತನಾಡಿದರು.
‘ಕ್ಷೇತ್ರದ ಹಳ್ಳಿಗಳಿಗೆ ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು, ವಿವಿಧೆಡೆ ಉದ್ಯಾನವನ, ಆಟದ ಮೈದಾನ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ₹100 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದರು.
ರಾಮೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಚ್.ಪ್ರಭು, ಮಾಜಿ ಅಧ್ಯಕ್ಷ ವಿ.ವೇಣುಗೋಪಾಲ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ, ಚಳ್ಳಘಟ್ಟ ಮಂಜುನಾಥ್, ಚೇತನ್ ಗೌಡ, ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದ ನರಸಿಂಹಮೂರ್ತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.