ADVERTISEMENT

ವೈದ್ಯನ ಮೇಲೆ ಹಲ್ಲೆ: ಇನ್‌ಸ್ಪೆಕ್ಟರ್, ಹೆಡ್ ಕಾನ್‌ಸ್ಟೆಬಲ್‌ಗಳ ತಲೆದಂಡ

* ವಿಚಾರಣೆ ನೆಪದಲ್ಲಿ ವೈದ್ಯನ ಮೇಲೆ ಹಲ್ಲೆ * ಪೊಲೀಸ್ ಕಮಿಷನರ್ ಕೈ ಸೇರಿದ ತನಿಖೆ ವರದಿ

​ಪ್ರಜಾವಾಣಿ ವಾರ್ತೆ
Published 18 ಮೇ 2021, 16:12 IST
Last Updated 18 ಮೇ 2021, 16:12 IST
ಇನ್‌ಸ್ಪೆಕ್ಟರ್ ಕಾತ್ಯಾಯಿನಿ
ಇನ್‌ಸ್ಪೆಕ್ಟರ್ ಕಾತ್ಯಾಯಿನಿ   

ಬೆಂಗಳೂರು: ರೆಮ್‌ಡಿಸಿವಿರ್ ಚುಚ್ಚುಮದ್ದು ಅಕ್ರಮ ಮಾರಾಟದ ವಿಚಾರಣೆ ನೆಪದಲ್ಲಿ ವೈದ್ಯನ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಸಂಜಯನಗರ ಠಾಣೆ ಇನ್‌ಸ್ಪೆಕ್ಟರ್ ಕಾತ್ಯಾಯಿನಿ ಆಳ್ವ ಹಾಗೂ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳ ತಲೆದಂಡವಾಗಿದೆ.

ನಗರದ ಶ್ರೀ ಸಾಯಿ ಆಸ್ಪತ್ರೆ ವೈದ್ಯ ಡಾ. ನಾಗರಾಜ್ ಅವರನ್ನು ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಿ ಅಕ್ರಮ ಬಂಧನದಲ್ಲಿರಿಸಿ ಹಲ್ಲೆ ಮಾಡಲಾಗಿತ್ತು ಎನ್ನಲಾಗಿದೆ. ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಡಾ. ನಾಗರಾಜ್, ತಮ್ಮ ಮೇಲಾದ ಹಲ್ಲೆ ಬಗ್ಗೆ ಸೋಮವಾರ ವಿಡಿಯೊ ಹರಿಬಿಟ್ಟಿದ್ದರು.

ವಿಷಯ ಗಮನಕ್ಕೆ ಬರುತ್ತಿದ್ದಂತೆ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ, ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜೆ.ಸಿ.ನಗರ ಎಸಿಪಿ ರೀನಾ ಸುವರ್ಣ ಅವರಿಗೆ ಸೂಚಿಸಿದ್ದರು. ತನಿಖೆ ಪೂರ್ಣಗೊಳಿಸಿದ್ದ ಎಸಿಪಿ, ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಅವರಿಗೆ ಮಂಗಳವಾರವೇ ವರದಿ ಸಲ್ಲಿಸಿದ್ದಾರೆ. ಅದೇ ವರದಿ ಆಧರಿಸಿ ಪೊಲೀಸ್ ಕಮಿಷನರ್ ಕಮಲ್ ಪಂತ್, ಇನ್‌ಸ್ಪೆಕ್ಟರ್ ಕಾತ್ಯಾಯಿನಿ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಕಮಲ್ ಪಂತ್, ‘ಇನ್‌ಸ್ಪೆಕ್ಟರ್ ಹಾಗೂ ಇಬ್ಬರು ಸಿಬ್ಬಂದಿ ಮೇಲಿರುವ ಆರೋಪ ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ. ಮೂವರನ್ನೂ ಅಮಾನತು ಮಾಡಿ, ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ ಹೊರಡಿಸಲಾಗಿದೆ’ ಎಂದರು.

ಎತ್ತಂಗಡಿ ಆಗಿದ್ದ ಇನ್‌ಸ್ಪೆಕ್ಟರ್; ವೈದ್ಯರ ವಿಡಿಯೊ ಹೊರಬಂದ ಬೆನ್ನಲ್ಲೇ ಕಾತ್ಯಾಯಿನಿ ಹಾಗೂ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳನ್ನು ಸಂಜಯನಗರ ಠಾಣೆಯಿಂದ ಎತ್ತಂಗಡಿ ಮಾಡಿ ಡಿಸಿಪಿ ಕಚೇರಿಗೆ ನಿಯುಕ್ತಿಗೊಳಿಸಲಾಗಿತ್ತು. ಇದೀಗ ಅವರನ್ನು ಸೇವೆಯಿಂದಲೇ ಅಮಾನತು ಮಾಡಲಾಗಿದೆ.

ವೈದ್ಯನ ವಿಡಿಯೊ: ‘ವೃತ್ತಿಯನ್ನು ಗೌರವಿಸಿ ನನ್ನ ಪಾಡಿಗೆ ನಾನು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೆ. ನನಗೂ ರೆಮ್‌ಡಿಸಿವಿರ್ ಚುಚ್ಚುಮದ್ದು ಮಾರಾಟಕ್ಕೂ ಯಾವುದೇ ಸಂಬಂಧವಿಲ್ಲ. ಯಾರೋ ನನ್ನ ಹೆಸರು ಹೇಳಿದರೆಂಬ ಕಾರಣಕ್ಕೆ ಇನ್‌ಸ್ಪೆಕ್ಟರ್ ಕಾತ್ಯಾಯಿನಿ ಹಾಗೂ ಸಿಬ್ಬಂದಿ ನನ್ನನ್ನು ಠಾಣೆಗೆ ಕರೆದೊಯ್ದು ಎರಡು ದಿನ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದರು’ ಎಂದು ಡಾ. ನಾಗರಾಜ್ ವಿಡಿಯೊದಲ್ಲಿ ಹೇಳಿದ್ದರು.

‘ಸುಖಾಸುಮ್ಮನೇ ನನ್ನನ್ನು ಮನಬಂದಂತೆ ಥಳಿಸಿದ್ದಾರೆ. ದೇಹದ ಹಲವು ಭಾಗಗಳಿಗೆ ಹೊಡೆದು, ಹಣವನ್ನೂ ಕಿತ್ತುಕೊಂಡಿದ್ದಾರೆ. ನನ್ನ ತಪ್ಪಿಲ್ಲವೆಂಬುದು ತಿಳಿಯುತ್ತಿದ್ದಂತೆ ಬಿಟ್ಟು ಕಳುಹಿಸಿದ್ದಾರೆ. ಇದೀಗ ಹಾಸಿಗೆ ಹಿಡಿದಿದ್ದು, ಈ ಸ್ಥಿತಿಗೆ ಕಾರಣರಾದ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ’ ಎಂದೂ ಒತ್ತಾಯಿಸಿದ್ದರು.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಇನ್‌ಸ್ಪೆಕ್ಟರ್ ಕಾತ್ಯಾಯಿನಿ, ‘ರೆಮ್‌ಡಿಸಿವಿರ್ ಚುಚ್ಚುಮದ್ದು ಮಾರುತ್ತಿದ್ದ ಕೆಲವರನ್ನು ಬಂಧಿಸಲಾಗಿತ್ತು. ಅವರು ನೀಡಿದ್ದ ಮಾಹಿತಿ ಆಧರಿಸಿ ಹಲವು ವೈದ್ಯರಿಗೆ ನೋಟಿಸ್ ನೀಡಲಾಗಿತ್ತು. ಯಾರ ಮೇಲೂ ಹಲ್ಲೆ ಮಾಡಿಲ್ಲ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.