ADVERTISEMENT

ಲಾಲ್‌ಬಾಗ್‌: ಜ.14ರವರೆಗೆ ‘ಸಂಕ್ರಾಂತಿ ಮೇಳ’

ರೈತರಿಂದ ನೇರವಾಗಿ ಗ್ರಾಹಕರಿಗೆ ‘ಕೃಷಿ ಉತ್ಪನ್ನಗಳು

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 19:52 IST
Last Updated 11 ಜನವರಿ 2021, 19:52 IST
ಲಾಲ್‌ಬಾಗ್‌ ಉದ್ಯಾನದಲ್ಲಿ ರಾಗಿ ರಾಶಿಗಳಿಗೆ ಆರತಿ ಬೆಳಗುವ ಮೂಲಕ ‘ಸಂಕ್ರಾಂತಿ ಮೇಳ’ಕ್ಕೆ ಚಾಲನೆ ನೀಡಲಾಯಿತು
ಲಾಲ್‌ಬಾಗ್‌ ಉದ್ಯಾನದಲ್ಲಿ ರಾಗಿ ರಾಶಿಗಳಿಗೆ ಆರತಿ ಬೆಳಗುವ ಮೂಲಕ ‘ಸಂಕ್ರಾಂತಿ ಮೇಳ’ಕ್ಕೆ ಚಾಲನೆ ನೀಡಲಾಯಿತು   

ಬೆಂಗಳೂರು: ಆಳೆತ್ತರಕ್ಕೆ ನಿಂತಿರುವ ಕಬ್ಬಿನ ಜಲ್ಲೆಗಳು. ರಾಶಿ ಬಿದ್ದಿರುವಅವರೆ, ಕಡಲೆಕಾಯಿ, ಗೆಣಸು. ಪುಷ್ಪಾಲಂಕೃತ ರಾಗಿ ಮತ್ತು ಭತ್ತದ ರಾಶಿ. ಇದು ಲಾಲ್‌ಬಾಗ್‌ ಉದ್ಯಾನದಲ್ಲಿ ಹಬ್ಬಕ್ಕೂ ಮುನ್ನವೇ ತಲೆ ಎತ್ತಿರುವ ಗ್ರಾಮೀಣ ಸಂಕ್ರಾಂತಿ ಸೊಗಡಿನ ನೋಟ.

ಮಕರ ಸಂಕ್ರಾಂತಿ ಅಂಗವಾಗಿ ಹಾಪ್‌ಕಾಮ್ಸ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಲಾಲ್‌ಬಾಗ್‌ನ ಗಾಜಿನ ಮನೆ ಮುಂಭಾಗದಲ್ಲಿ‘ಸಂಕ್ರಾಂತಿ ಮೇಳ’ ಆಯೋಜಿಸಲಾಗಿದೆ. ಮೇಳಕ್ಕೆ ಅಧಿಕೃತವಾಗಿ ಸೋಮವಾರ ಚಾಲನೆ ನೀಡಲಾಗಿದ್ದು, ಇದೇ 14ರವರೆಗೆ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೇಳ ನಡೆಯಲಿದೆ.

ಸಂಕ್ರಾಂತಿಗೆ ವಿಶೇಷವಾಗಿ ಬಳಸುವ ಎಲ್ಲ ಉತ್ಪನ್ನಗಳನ್ನುಮೇಳದಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗೆಣಸು, ಅವರೆ, ಬಾಳೆ, ಬೆಲ್ಲ, ಕಬ್ಬು, ಕೊಬ್ಬರಿ, ನೆಲಗಡಲೆ,ಗಜ್ಜರಿ, ಏಲಕ್ಕಿ ಬಾಳೆ, ರಸಬಾಳೆ, ಪಚ್ಚಬಾಳೆ, ನೇಂದ್ರ ಬಾಳೆ, ಜೋಳದ ರೊಟ್ಟಿ, ಶೇಂಗಾ ಚಟ್ನಿ ಸೇರಿದಂತೆ ಹಬ್ಬಕ್ಕೆ ಬೇಕಾದ ಎಲ್ಲ ಉತ್ಪನ್ನಗಳ ಖರೀದಿಗೆ ಒಂದೇ ಕಡೆ ಮಳಿಗೆಗಳನ್ನು ತೆರೆಯಲಾಗಿದೆ.

ADVERTISEMENT

‘ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮೇಳ ಆಯೋಜಿಸಿದ್ದೇವೆ.ಉದ್ಯಾನಕ್ಕೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಐದು ಸಾವಿರಕ್ಕೂ ಹೆಚ್ಚು ವಾಯುವಿಹಾರಿಗಳು ಬರುತ್ತಾರೆ. ಸಂಕ್ರಾಂತಿಗೆ ಬಳಸುವ ಉತ್ಪನ್ನಗಳು ಒಟ್ಟಿಗೆ ಲಭ್ಯವಾಗುವುದರಿಂದ ಗ್ರಾಹಕರ ಖರೀದಿಗೂ ಅನುಕೂಲವಾಗಿದೆ’ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಎಸ್.ಮಿರ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಹಕರ ಖರೀದಿಯೂ ರೈತ ಸಹಕಾರಿ ಸಂಸ್ಥೆಯ ಬಲವರ್ಧನೆಗೆ ನೆರವಾಗುತ್ತದೆ. ಸಾರ್ವಜನಿಕರೂ ಬಂದು ತಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದು. ಆದರೆ, ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.