ADVERTISEMENT

ತಂತ್ರಜ್ಞಾನದ ದೂರದೃಷ್ಟಿಗೆ ಶಕ್ತಿ ತುಂಬಿದ ಸ್ಯಾಪ್‌ಲ್ಯಾಬ್ಸ್‌

ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 16:17 IST
Last Updated 5 ಆಗಸ್ಟ್ 2025, 16:17 IST
ಸ್ಯಾಪ್‌ಲ್ಯಾಬ್ಸ್‌ ಇನ್ನೋವೇಷನ್ ಪಾರ್ಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲೆಕ್ಟ್ರಿಕ್ ವಾಹನದಲ್ಲಿ ಬಂದ ಸಿದ್ದರಾಮಯ್ಯ. ಪ್ರಿಯಾಂಕ್‌ ಖರ್ಗೆ ಜೊತೆಯಲ್ಲಿದರು. 
ಸ್ಯಾಪ್‌ಲ್ಯಾಬ್ಸ್‌ ಇನ್ನೋವೇಷನ್ ಪಾರ್ಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲೆಕ್ಟ್ರಿಕ್ ವಾಹನದಲ್ಲಿ ಬಂದ ಸಿದ್ದರಾಮಯ್ಯ. ಪ್ರಿಯಾಂಕ್‌ ಖರ್ಗೆ ಜೊತೆಯಲ್ಲಿದರು.    

ಬೆಂಗಳೂರು: ‘ಸ್ಯಾಪ್‌ ಲ್ಯಾಬ್ಸ್‌ ಇಂಡಿಯಾ ಇನ್ನೋವೇಷನ್ ಪಾರ್ಕ್‌, ನಮ್ಮ ರಾಜ್ಯದ ತಂತ್ರಜ್ಞಾನದ ದೂರದೃಷ್ಟಿಗೆ ಶಕ್ತಿ ತುಂಬಿದೆ. ಸಾಮರ್ಥ್ಯ, ವಿಶ್ವಾಸಾರ್ಹತೆ ಹಾಗೂ ಶ್ರೇಷ್ಠತೆಯಲ್ಲಿನ ನಮ್ಮ ಬದ್ಧತೆಗೆ ಕನ್ನಡಿ ಹಿಡಿದಂತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ದೇವನಹಳ್ಳಿಯಲ್ಲಿ ಆರಂಭವಾದ ಸ್ಯಾಪ್‌ ಲ್ಯಾಬ್ಸ್ ಇಂಡಿಯಾ(ಎಸ್‌ಎಪಿ) ಇನ್ನೋವೇಷನ್ ಪಾರ್ಕ್ ಅನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಫ್ಟವೇರ್ ಅಲ್ಲದೇ ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್ ಹಾಗೂ ಕೈಗಾರಿಕೆ 4.0 ಸೇರಿದಂತೆ 21ನೇ ಶತಮಾನವನ್ನು ವ್ಯಾಖ್ಯಾನಿಸಬಲ್ಲ ತಂತ್ರಜ್ಞಾನದಲ್ಲಿಯೂ ಬೆಂಗಳೂರು ಮುಂದಿದೆ. ಈಗ ಸ್ಯಾಪ್‌ ಲ್ಯಾಬ್ಸ್‌ ಹೊಸ ಸೇರ್ಪಡೆಯಾಗಿದ್ದು, ಕರ್ನಾಟಕ, ಭಾರತದ ಶಕ್ತಿಕೇಂದ್ರವಾಗಿ ಬೆಳೆಯುವ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ’ ಎಂದು ವಿಶ್ಲೇಷಿಸಿದರು.

ADVERTISEMENT

‘ಸ್ಯಾಪ್‌ ಲ್ಯಾಬ್ಸ್‌ನವರು ವಿಶ್ವದರ್ಜೆಯ ಕ್ಯಾಂಪಸ್ ನಿರ್ಮಾಣಕ್ಕೆ ದೇವನಹಳ್ಳಿಯ ಈ ಪ್ರದೇಶದ ಆಯ್ಕೆ ನಿಜಕ್ಕೂ ಸಾಂಕೇತಿಕವಾಗಿದೆ. 15,000 ವೃತ್ತಿಪರರು ಕೆಲಸ ಮಾಡುವಂತೆ ವಿನ್ಯಾಸಗೊಳಿಸಿರುವ ಈ ಕ್ಯಾಂಪಸ್ ಭವಿಷ್ಯದಲ್ಲಿ ಉನ್ನತ ಮೌಲ್ಯವುಳ್ಳ ಉದ್ಯೋಗ ಸೃಷ್ಟಿ ಹಾಗೂ ಯುವಜನರಿಗೆ ಅವಕಾಶಗಳನ್ನು ಒದಗಿಸುವ ನಮ್ಮ ಧ್ಯೇಯಕ್ಕೆ ಮೈಲುಗಲ್ಲಾಗಲಿದೆ’ ಎಂದರು.

‘ಕರ್ನಾಟಕ ಇಂದು ಭಾರತದ ಜಿಡಿಪಿಗೆ ಶೇ 8ಕ್ಕಿಂತಲೂ ಹೆಚ್ಚು ಕೊಡುಗೆ ನೀಡುತ್ತಿದೆ. ಐ.ಟಿ ರಫ್ತಿನಲ್ಲಿ ಶೇ 35ರಷ್ಟು ಪಾಲನ್ನು ಹೊಂದಿದೆ. ಶೇ 40ಕ್ಕೂ ಹೆಚ್ಚು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಸಂಶೋಧನಾ ರಫ್ತಿಗೆ ಕೇಂದ್ರವಾಗಿದ್ದು, 500ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು, 18 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿವೆ. ಭಾರತ ಶೇ 40ರಷ್ಟು ಯೂನಿಕಾರ್ನ್‌ಗಳನ್ನು ಹೊಂದಿದೆ. ಅದರಲ್ಲಿ ಶೇ 40ಕ್ಕೂ ಹೆಚ್ಚು ಬೆಂಗಳೂರಲ್ಲೇ ನೆಲಸಿವೆ’ ಎಂದು ವಿವರಿಸಿದರು.‌

ಕಾರ್ಯಕ್ರಮದಲ್ಲಿ  ಐಟಿ–ಬಿಟಿ ಸಚಿವ ‌ಪ್ರಿಯಾಂಕ್‌ ಖರ್ಗೆ, ಇಲಾಖೆ ಕಾರ್ಯದರ್ಶಿ ಏಕರೂಪ ಕೌರ್, ಸ್ಯಾಪ್‌ ಲ್ಯಾಬ್ಸ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಸಿಂಧು ಗಂಗಾಧರನ್ ಪಾಲ್ಗೊಂಡಿದ್ದರು.

ಏರ್‌ಪೋರ್ಟ್‌ಗೆ ಮೆಟ್ರೊ ಮಾರ್ಗ ನಿರ್ಮಾಣ ಉಪನಗರ ರೈಲು ಯೋಜನೆ 2029ರೊಳಗೆ ಪೂರ್ಣವಾಗಲಿದೆ. ಸಮತೋಲಿತ ವಿಕೇಂದ್ರೀಕೃತ ಮತ್ತು ಸುಸ್ಥಿರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ

–ಸಿದ್ದರಾಮಯ್ಯ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.