ADVERTISEMENT

ಮಹಲಿನ ನಡುವೆ ವಿರೂಪಗೊಂಡ ಸಾರಕ್ಕಿ ಕೆರೆ

ಸುತ್ತಮುತ್ತ ಒತ್ತುವರಿದಾರರ ‍ಪಾರುಪತ್ಯ * ಮಲ – ಮೂತ್ರ ವಿಸರ್ಜನೆಗೂ ಕೆರೆ ಅಂಗಳ ಬಳಕೆ

ಸುಬ್ರಹ್ಮಣ್ಯ ಎಚ್.ಎಂ
Published 23 ಡಿಸೆಂಬರ್ 2018, 19:53 IST
Last Updated 23 ಡಿಸೆಂಬರ್ 2018, 19:53 IST
ಕೆರೆ ಪಕ್ಕದ ಅಪಾರ್ಟ್‌ಮೆಂಟ್‌ ಸಮುಚ್ಛಯ
ಕೆರೆ ಪಕ್ಕದ ಅಪಾರ್ಟ್‌ಮೆಂಟ್‌ ಸಮುಚ್ಛಯ   

ಬೆಂಗಳೂರು:‘ನನ್ನ ಒಡಲಲ್ಲಿ ಕೇವಲ ಕಸದ ತ್ಯಾಜ್ಯವಷ್ಟೇ ತುಂಬಿಲ್ಲ. ಹಳೆ ಬಟ್ಟೆ ಗಂಟುಗಳು, ಹರಿದ ಹಾಸಿಗೆ, ತಲೆದಿಂಬು, ರುಬ್ಬುವ ಕಲ್ಲು, ಒರಳುಕಲ್ಲು, ಕಿತ್ತುಹೋದ ಕಿಟಕಿ – ಬಾಗಿಲು, ಒಡೆದ ಗಾಜಿನ ಚೂರು, ಸಿಮೆಂಟ್‌ ಪಟ್ಟಿಗಳು, ಮುರಿದ ಪೀಠೋಪಕರಣಗಳು ಸೇರಿದಂತೆ ಬೇಡವಾದ ವಸ್ತುಗಳೆಲ್ಲವೂ ಒಡಲು ಸೇರಿ ಬೇನೆ ಹೆಚ್ಚಾಗಿದೆ...’

ಜರಗನಹಳ್ಳಿ ವಾರ್ಡ್‌ನಲ್ಲಿರುವ ಸಾರಕ್ಕಿ ಕೆರೆಯ ಆರ್ತನಾದವಿದು. ಆದರೆ, ಈ ಜಲಮೂಲದ ನೋವಿಗೆ ನಗರದ ಜನತೆ ಕಿವಿಗೊಡುತ್ತಿಲ್ಲ.

ಒಂದು ಕಾಲದಲ್ಲಿ ಜರಗನಹಳ್ಳಿ, ಕೋಣನಕುಂಟೆ, ಪುಟ್ಟೇನಹಳ್ಳಿ, ಸಾರಕ್ಕಿ ಊರುಗಳಿಗೆ ನೀರುಣಿಸುತ್ತಿದ್ದ ಕೆರೆ ಇದಾಗಿತ್ತು. ಕೆರೆ ಏರಿ ಕೆಳಗಿದ್ದ ಸಮೃದ್ಧ ಹುಲ್ಲುಗಾವಲಿನಲ್ಲಿ ದನಕರುಗಳು ಮನಸೋ ಇಚ್ಛೆ ಮೇಯುತ್ತಿದ್ದವು. ಈ ಕೆರೆ ಅಚ್ಚುಕಟ್ಟು ಪ್ರದೇಶ ಉತ್ತಮ ತಳಿಯ ಭತ್ತ ಬೆಳೆಯುವುದಕ್ಕೆ ಪ್ರಸಿದ್ಧವಾಗಿತ್ತು.

ADVERTISEMENT

‘ಕೆರೆದಂಡೆಯ ಇಕ್ಕೆಲಗಳಲ್ಲಿ ವಿವಿಧ ಬಗೆಯ ಅಡುಗೆ ಬಳಕೆ ಸೊಪ್ಪು ಬೆಳೆಯುತ್ತಿತ್ತು. ಕುಂಬಳ, ಸೊರೇಕಾಯಿ ಬಳ್ಳಿಯಿಂದ ಕೂಡಿದ್ದ ಕೆರೆ ಚೆಲುವು ಹೆಂಗಳೆಯರ ಪಾಲಿಗೆ ಮುದ ನೀಡುವ ತಾಣವಾಗಿತ್ತು. ಆ ಕಾಲದ ಯುವತಿಯರಿಗೆ ಮನೆವಾರ್ತೆ ಹಂಚಿಕೊಂಡು ಮನಸ್ಸು ಹಗುರು ಮಾಡಿಕೊಳ್ಳಲು ಈ ಕೆರೆ ಪ್ರದೇಶವೇ ನೆಚ್ಚಿನ ತಾಣವಾಗಿತ್ತು. ಗುಪ್ತ ಪ್ರೇಮ ಪ್ರಕರಣಗಳಿಗೆ ಕೆರೆ ತೂಬಿನ ಜಾಗ ಸುರಕ್ಷಿತವಾಗಿತ್ತು’ ಎಂದು ಹಳೆ ನೆನಪುಗಳಿಗೆ ಜಾರಿದರು ಹೂವಿನ ವ್ಯಾಪಾರಿ ಪುಟ್ಟಮ್ಮ.

‘ನಗರ ಬೆಳೆದಂತೆ ಕೆರೆ ಸುತ್ತಮುತ್ತ ಬಲಾಢ್ಯರು ಸೇರಿಕೊಂಡು ಒತ್ತುವರಿ ಮಾಡಿಕೊಂಡರು. ದೊಡ್ಡದಾಗಿ ಮನೆಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ತಲೆ ಎತ್ತಿದವು. ಇಲ್ಲೀಗ ಒತ್ತುವರಿದಾರರದ್ದೇ ಪಾರುಪತ್ಯ. ನಮ್ಮಂತಹ ಬಡವರು ಹಾಸಿಗೆ ಇದ್ದಷ್ಟೇ ಕಾಲುಚಾಚಿ ಮಲುಗುತ್ತಿದ್ದೇವೆ’ಎಂದು ಹನಿಗಣ್ಣಾದರು
ಪುಟ್ಟಮ್ಮ.‌

ಗಬ್ಬೆದ್ದು ನಾರುತ್ತಿದೆ ಕೆರೆ ಅಂಗಳ: ಕೆರೆಯ ಒಡಲ ತುಂಬಾ ಕಳೆ ಸಸ್ಯವೇ ತುಂಬಿಕೊಂಡಿದೆ. ಒತ್ತುವರಿ ಸಮಸ್ಯೆಯಿಂದ ಕೆರೆ ಪಾತ್ರ ಕಿರಿದಾಗಿದೆ. ಸುತ್ತ ಮುತ್ತಲ ಚರಂಡಿಗಳಲ್ಲಿಹರಿಯುವ ಕೊಳಚೆ ನೀರು ಮಳೆಗಾಲದಲ್ಲಿ ನೇರವಾಗಿ ಕೆರೆ ಪ್ರವೇಶಿಸುತ್ತದೆ. ಇಲ್ಲಿನ ಸುತ್ತಮುತ್ತ ಪ್ರದೇಶದಲ್ಲಿ ವಾಸವಾಗಿರುವ ವಲಸಿಗರಿಗೆ ಮಲ – ಮೂತ್ರ ವಿಸರ್ಜನೆ ಮಾಡಲು ಕೆರೆ ಅಂಗಳವೇ ಶೌಚಾಲಯ. ಮುಂಜಾನೆಯೇ ತಂಬಿಗೆ ಹಿಡಿದು ಕೆರೆ ದಂಡೆಯತ್ತ ‘ದಂಡಯಾತ್ರೆ’ ಹೊರಡುವವವರ ದೊಡ್ಡ ದಂಡೇ ಇಲ್ಲಿ ಕಾಣಸಿಗುತ್ತದೆ. ಅಲ್ಲದೆ, ಕೋಳಿ ಮಾಂಸ ಮಾರಾಟಗಾರರಿಗೆ ತ್ಯಾಜ್ಯ ತಂದು ಸುರಿಯಲು ಇದೇ ‘ಪ್ರಶಸ್ತ ಜಾಗ’ ಎಂಬಂತೆ ದುರ್ಬಳಕೆಯಾಗುತ್ತಿದೆ.

ಕೆರೆ ಅಭಿವೃದ್ಧಿಗೆ ಚಾಲನೆ: ಕೊಳಚೆ ನೀರು ಸೇರಿ, ಕಳೆ ಸಸ್ಯಗಳು ಬೆಳೆದು ಹಾಗೂ ಸುತ್ತಲಿನ ಜಾಗ ಒತ್ತುವರಿಯಾಗಿ ಈ ಜಲಮೂಲ ವಿನಾಶದ ಅಂಚು ತಲುಪಿತ್ತು. ಹೈಕೋರ್ಟ್ ನಿರ್ದೇಶನ ಮೇರೆಗೆ ಜಿಲ್ಲಾಡಳಿತ 2015ರ ಏಪ್ರಿಲ್‌ನಲ್ಲಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವು ಮಾಡಿತ್ತು. ರಾಜ್ಯ ಸರ್ಕಾರದ ಅನುದಾನದಲ್ಲಿ ಈಗ ಬಿಬಿಎಂಪಿ ಕೆರೆಗಳ ಅಭಿವೃದ್ಧಿ ವಿಭಾಗ 2017ರಲ್ಲೇ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಜಲಮೂಲದ ಸುತ್ತಲೂ ತಂತಿ ಬೇಲಿ ಅಳವಡಿಸಿದೆ. ವಾಯುವಿಹಾರ ಪಥ ನಿರ್ಮಾಣ ಕೆಲಸ ನಡೆದಿದೆ. ಈ ಕೆರೆ ಸುತ್ತಲಿನ ಬದುವಿಗೆ ಹೊಂದಿಕೊಂಡಂತೆ ಮೂರು ಕಡೆ ಮುಖ್ಯದ್ವಾರಗಳ ನಿರ್ಮಾಣ, ಉದ್ಯಾನ, ಎರಡು ಕಲ್ಯಾಣಿಗಳ ನಿರ್ಮಾಣ ಕಾಮಗಾರಿಯನ್ನು ಹಂತ – ಹಂತವಾಗಿ ಕೈಗೊಳ್ಳುವ ಯೋಜನೆ ರೂಪಿಸಲಾಗಿದೆ.

ಬೇಳೆ ಬೇಯಲು ಬೇಕಿತ್ತು ಈ ಕೆರೆ ನೀರು

ಆಗೆಲ್ಲಾ ಕೊಳವೆ ಬಾವಿಗಳು ಇರಲಿಲ್ಲ. ಈ ಕೆರೆ ನೀರೇ ಕುಡಿಯಲು ಬಳಕೆಯಾಗುತ್ತಿತ್ತು. ಬಾವಿಗಳಲ್ಲಿ ಸಿಗುತ್ತಿದ್ದ ಗಡುಸು ನೀರಿನಲ್ಲಿ ಬೇಳೆ ಕಾಳು, ಇನ್ನಿತರ ಧಾನ್ಯಗಳು ಬೇಯುತ್ತಿರಲಿಲ್ಲ. ಈ ಕೆರೆ ನೀರಿನಲ್ಲಿ ಬೇಳೆಕಾಳು ಚೆನ್ನಾಗಿ ಬೆಂದು ಹಿತವಾಗಿರುತ್ತಿತ್ತು. ಈ ಜಲಮೂಲದ ಇವತ್ತಿನ ಸ್ಥಿತಿ ನೋಡಿದರೆ ಮನಸ್ಸಿಗೆ ಬೇಸರವಾಗುತ್ತದೆ.

- ಕೃಷ್ಣಪ್ಪ, ಸ್ಥಳೀಯ ನಿವಾಸಿ

ಕೆರೆಯ ಹುಲ್ಲೇ ದನಗಳಿಗೆ ಮೇವು..

ನನ್ನ ಯೌವ್ವನದ ದಿನಗಳಲ್ಲಿ ಪ್ರತಿದಿನ ಮುಂಜಾನೆ ಕೆರೆ ದಂಡೆಯಲ್ಲಿ ಬೆಳೆಯುತ್ತಿದ್ದ ಹುಲ್ಲು ಸಂಗ್ರಹಿಸುತ್ತಿದ್ದೆ. ದನ ಕರುಗಳಿಗೆ ಸಮೃದ್ಧಿಯಾದ ಮೇವು ನೀಡುತ್ತಿದ್ದ ಅಂದಿನ ಕೆರೆ ‍ಪರಿಸರದ ಮರು ಸೃಷ್ಟಿ ಅಸಾಧ್ಯ. ಈಗ ಕೆರೆಯಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಇದು ಹೊಸ ರೂಪ ಪಡೆಯುವ ನಿರೀಕ್ಷೆ ಇದೆ. ಉತ್ತಮ ಉದ್ಯಾನ, ವಾಯುವಿಹಾರ ಪಥ ನಿರ್ಮಾಣಗೊಂಡರೆ ಸ್ಥಳೀಯರಿಗೆ ಅದುವೇ ಸಂತೋಷದ ಸಂಗತಿ

- ಕೃಷ್ಣ, ಸಾರಕ್ಕಿ ಗಾರ್ಡನ್‌ ನಿವಾಸಿ

‘ಪ್ರವಾಸಿ ತಾಣವಾಗಿ ಅಭಿವೃದ್ಧಿ’

‘ಕೆರೆ ಸುತ್ತಲೂ ವಾಯುವಿಹಾರಕ್ಕಾಗಿ 2.3ಕಿ.ಮೀ ಉದ್ದದ ಪಥ ನಿರ್ಮಾಣ ಮಾಡಲಾಗುತ್ತಿದೆ. ದೋಣಿ ವಿಹಾರ ವ್ಯವಸ್ಥೆ ಕಲ್ಪಿಸಿ ನಗರದ ಪ್ರವಾಸಿ ತಾಣವನ್ನಾಗಿ ರೂಪಿಸುವುದು ಯೋಜನೆ ಮುಖ್ಯ ಉದ್ದೇಶ. ಕೆರೆಯಲ್ಲಿ ಮಳೆ ನೀರು ಸಂಗ್ರಹ ಮಾಡಿ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿಯ ಕೆರೆ ಅಭಿವೃದ್ಧಿ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ತಿಳಿಸಿದರು.

ಜಲಮೂಲದೊಳಗೆ ಎರಡು ಜೌಗು ಪ್ರದೇಶಗಳ ನಿರ್ಮಾಣ ಯೋಜನೆಯೂ ಒಳಗೊಂಡಿದೆ. ರಾಸಾಯನಿಕವಾಗಿ ನೈಟ್ರೇಟ್‌ ಮತ್ತು ಫಾಸ್ಪೇಟ್‌ಗಳನ್ನು ಹೀರುವ ಸಸ್ಯಗಳನ್ನು ಜೌಗು ‍ಪ್ರದೇಶದಲ್ಲಿ ಬೆಳೆಸಲಾಗುವುದು. ಕೆರೆ ಮಧ್ಯದಲ್ಲಿ ಇರುವ ನಡುಗಡ್ಡೆ ಹಾಗೆಯೇ ಉಳಿಸಿಕೊಂಡು ಅದನ್ನು ಪಕ್ಷಿಗಳ ಆವಾಸ ಸ್ಥಾನವಾಗಿಸಲು ಯೋಜಿಸಲಾಗಿದೆ.‌

****

ಕೆರೆ ಪರಿಸರ ಸುಂದರಗೊಳಿಸಲು ಯೋಜನೆ ರೂಪಿಸಿದ್ದೇವೆ. ಆದರೆ, ಅನುದಾನದ ಕೊರತೆಯಿಂದ ಕಾಮಗಾರಿ ಕುಂಟುತ್ತಾ ಸಾಗಿದೆ

- ಬಿ.ಎಂ.ಶೋಭಾ ಮುನಿರಾಮ್‌, ಜರಗನಹಳ್ಳಿ ವಾರ್ಡ್‌ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.