ಬೆಂಗಳೂರು: ಭಾರತದ ಸಂವಿಧಾನವೂ ಜನರ ಘನತೆಯನ್ನು ಎತ್ತಿಹಿಡಿಯುವ ಜೊತೆಗೆ ಅವರನ್ನು ರಕ್ಷಿಸುವ ಕೆಲಸ ಮಾಡುತ್ತದೆ ಎಂದು ಚಿಂತಕ ಸರ್ಜಾಶಂಕರ್ ಹರಳಿಮಠ ಹೇಳಿದರು.
ನಗರದ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ್ದ ‘ಕನ್ನಡ ಸಾಹಿತ್ಯದಲ್ಲಿ ಭಾರತ ಸಂವಿಧಾನದ ಆಶಯ’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂವಿಧಾನ ಕೇವಲ ಕಾನೂನು ಕಟ್ಟಳೆಗಳ ಪುಸ್ತಕವಲ್ಲ. ಅದು ಭಾರತೀಯರ ಬದುಕಿನ ಸಾಧನ. ಭಾರತ ಬಹುಸಂಸ್ಕೃತಿಯ ದೇಶ. ಇಲ್ಲಿ ನೂರಾರು ಜಾತಿಗಳು, ಹತ್ತಾರು ಧರ್ಮಗಳು, ಸಾವಿರಾರು ಭಾಷೆಗಳು, ಆದಿವಾಸಿಗಳು, ಬುಡಕಟ್ಟು ಜನರು ಎಲ್ಲರೂ ಇದ್ದಾರೆ. ನಮ್ಮೆಲ್ಲರ ಸಂಪ್ರದಾಯಗಳು, ನಮ್ಮ ಆಚಾರ–ವಿಚಾರಗಳು, ಆಹಾರ ಪದ್ಧತಿಗಳು ವಿಭಿನ್ನವಾಗಿವೆ. ಆದ್ದರಿಂದ ನಾವೆಲ್ಲರೂ ಪರಸ್ಪರ ದ್ವೇಷಿಸದೆ, ಹಿಂಸೆಗೆ ಇಳಿಯದೆ ಪರಸ್ಪರರನ್ನು ಅರ್ಥ ಮಾಡಿಕೊಂಡು ಬದುಕಲು ಹಾಕಿಕೊಟ್ಟಿರುವ ವಿಧಿವಿಧಾನಗಳ ಒಂದು ನೀಲನಕ್ಷೆಯೇ ನಮ್ಮ ಸಂವಿಧಾನ’ ಎಂದು ವಿವರಿಸಿದರು.
‘ಪ್ರಜಾಪ್ರಭುತ್ವವನ್ನು ಸಾಧಿಸುವುದೇ ಸ್ವಾತಂತ್ರ್ಯಪೂರ್ವದ ಭಾರತೀಯರ ಕನಸಾಗಿತ್ತು. ಈ ಕನಸುಗಳಿಗೆ ಜೀವ ಕೊಟ್ಟವರು ನಮ್ಮ ಕವಿ, ಸಾಹಿತಿಗಳು. ಇವರು ತಮ್ಮ ಸಾಹಿತ್ಯದ ಮೂಲಕ ಒಂದು ಅಲಿಖಿತ ಭಾರತದ ಸಂವಿಧಾನವನ್ನೇ ರೂಪಿಸಿಬಿಟ್ಟರು. ಇದರಲ್ಲಿ ಕನ್ನಡ ಸಾಹಿತ್ಯದ ಪಾಲು ಗಣನೀಯವಾಗಿದೆ’ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಸರ್ವೇಶ್ ಬಿ.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಪ್ರಾಧ್ಯಾಪಕರಾದ ಚಂದ್ರಶೇಖರ್ ಎನ್., ಕುಪ್ಪನಹಳ್ಳಿ ಎಂ. ಬೈರಪ್ಪ, ಸೈಯದ್ ಮುಯಿನ್, ರವಿಶಂಕರ್ ಎ.ಕೆ., ಪ್ರೇಮಕುಮಾರ್ ಕೆ., ಕಿರಣಕುಮಾರ್ ಎಚ್.ಜಿ., ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.