ಬೆಂಗಳೂರು: ಸರ್ಜಾಪುರ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಮುಗಿದಿದ್ದು, ಸರ್ವಿಸ್ ರಸ್ತೆ ಅಭಿವೃದ್ಧಿಗೆ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಸೂಚಿಸಿದರು.
ಮಹದೇವಪುರ ವಲಯದಲ್ಲಿ ಮಂಗಳವಾರ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
‘ಮಹದೇವಪುರ ವಲಯ ವ್ಯಾಪ್ತಿಯ ಇಬ್ಬಲೂರು ಜಂಕ್ಷನ್‌ನಿಂದ ಕಾರ್ಮಲ್ ರಾವ್ ಆರ್.ಜೆ. ಟೆಕ್ ಪಾರ್ಕ್‌ವರೆಗೆ 4.7 ಕಿ.ಮೀ. ರಸ್ತೆ ವಿಸ್ತರಣೆ ಕಾರ್ಯ 2022ರಲ್ಲಿಯೇ ಮುಗಿದಿದೆ. ಆದರೆ ಸರ್ವಿಸ್ ರಸ್ತೆಯಲ್ಲಿರುವ ಸ್ವತ್ತುಗಳಿಗೆ ಟಿಡಿಆರ್ ಅಡಿ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ವಿಳಂಬವಾಗಿದ್ದು, ರಸ್ತೆ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ’ ಎಂದು ವಲಯ ಅಧಿಕಾರಿ ಮಾಹಿತಿ ನೀಡಿದರು.
‘ಸರ್ವಿಸ್ ರಸ್ತೆಯಲ್ಲಿ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಗೆ ಒಪ್ಪಿರುವ ಮಾಲೀಕರಿಂದ ಪರಿತ್ಯಾಜನ ಪತ್ರದ ಮೂಲಕ ಭೂಸ್ವಾಧೀನಗೊಂಡಿರುವ ಜಾಗವನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಳ್ಳಬೇಕು. ಉಳಿದವರ ಮನವೊಲಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು’ ಎಂದು ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದರು.
ಇಬ್ಲೂರು ಜಂಕ್ಷನ್, ಹರಳೂರು ರಸ್ತೆ ಜಂಕ್ಷನ್ ಹಾಗೂ ಕಸವನಹಳ್ಳಿ ಜಂಕ್ಷನ್‌ಗಳ ಸುಧಾರಣೆ ಮಾಡಬೇಕು. ಪಾದಚಾರಿ ಮಾರ್ಗಗಳ ನಿರ್ಮಾಣ, ಪಾದಚಾರಿ ಕ್ರಾಸಿಂಗ್‌ಗಳ ಅಳವಡಿಕೆ ಸೇರಿದಂತೆ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಹೇಳಿದರು.
ಪಾದಚಾರಿ ಮಾರ್ಗಗಳ ಸಮರ್ಪಕ ನಿರ್ವಹಣೆ, ಸೈಡ್ ಡ್ರೈನ್‌ಗಳ ದುರಸ್ತಿ ಹಾಗೂ ಹೂಳೆತ್ತುವುದು, ರಸ್ತೆ ಬದಿ ತ್ಯಾಜ್ಯ ಬಿಸಾಡದಂತೆ ಕ್ರಮವಹಿಸುವುದು, ಪಾದಚಾರಿ ಮೇಲ್ಸೇತುವೆ ನಿರ್ಮಿಸುವುದು, ಹೊಸದಾಗಿ ಪಾದಚಾರಿ ಮಾರ್ಗ ನಿರ್ಮಾಣ ಸೇರಿದಂತೆ ಹಲವು ನಿರ್ದೇಶನಗಳನ್ನು ಅಧಿಕಾರಿಗಳಿಗೆ ನೀಡಿದರು.
ಒತ್ತುವರಿ ಸಮೀಕ್ಷೆಗೆ ಡ್ರೋನ್
ಮಹದೇವಪುರ ವಲಯ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳಲ್ಲಿ ಸಮರ್ಪಕವಾಗಿ ಹೂಳೆತ್ತಬೇಕು. ರಾಜಕಾಲುವೆಗಳು ಒತ್ತುವರಿಯಾಗಿರುವುದನ್ನು ಗಮನಿಸುವ ಸಲುವಾಗಿ ಡ್ರೋನ್ ಮೂಲಕ ಸಮೀಕ್ಷೆ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದರು. ಶ್ರೀನಿವಾಸ ಕ್ಲಾಸಿಕ್ ವಸತಿ ಸಮುಚ್ಚಯದಿಂದ ರಾಜಕಾಲುವೆಗೆ ನೇರವಾಗಿ ಕೊಳಚೆ ನೀರು ಹರಿಬಿಟ್ಟಿರುವುದನ್ನು ಗಮನಿಸಿ ಸಮುಚ್ಛಯದ ಮಾಲೀಕರಿಗೆ ₹1 ಲಕ್ಷ ದಂಡ ವಿಧಿಸಲು ಹೇಳಿದರು. ಕ್ಲೌಡ್ ನೈನ್ ಆಸ್ಪತ್ರೆ ಬಳಿ ಕಸ ವರ್ಗಾವಣೆ ಸ್ಥಳ ಪರಿಶೀಲನೆ ನಡೆಸಿದಾಗ ‘ನಾಗರಿಕರು ರಾತ್ರಿ ವೇಳೆ ಕಸ ತಂದು ಬಿಸಾಡುತ್ತಾರೆ’ ಎಂದು ಸ್ಥಳೀಯರು ದೂರಿದರು. ಈ ಸಂಬಂಧ ಕಸ ವರ್ಗಾವಣೆ ಸ್ಥಳಕ್ಕೆ ಶೆಡ್ ರೀತಿ ನಿರ್ಮಾಣ ಮಾಡಿ ಕಸ ಬಿಸಾಡದಂತೆ ಕ್ರಮವಹಿಸಲು ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.