ADVERTISEMENT

ಜೀವಿ– ಪರಿಸರ ವ್ಯವಸ್ಥೆ ಉಳಿಸಿ: ಜೀವವೈವಿಧ್ಯ ಮಂಡಳಿಗೆ ಮೊರೆ

ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ 6,316 ಮರಗಳ ಹನನ– ಪರಿಸರ ಕಾರ್ಯಕರ್ತರ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 20:57 IST
Last Updated 1 ಜುಲೈ 2021, 20:57 IST
ವಿನೋದ್‌ ಜೇಕಬ್‌ (ಎಡ ತುದಿ) ಹಾಗೂ ಪರಿಸರ ಕಾರ್ಯಕರ್ತ ವಿಜಯ್ ನಿಶಾಂತ್‌ ಅವರು ಅನಂತ ಹೆಗಡೆ ಆಶೀಸರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ವಿನೋದ್‌ ಜೇಕಬ್‌ (ಎಡ ತುದಿ) ಹಾಗೂ ಪರಿಸರ ಕಾರ್ಯಕರ್ತ ವಿಜಯ್ ನಿಶಾಂತ್‌ ಅವರು ಅನಂತ ಹೆಗಡೆ ಆಶೀಸರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.   

ಬೆಂಗಳೂರು: ಸಿಂಗನಾಯಕನಹಳ್ಳಿ ಕೆರೆ ಪುನರುಜ್ಜೀವನಕ್ಕಾಗಿ 6,316 ಮರಗಳನ್ನು ಕಡಿಯುವ ಪ್ರಸ್ತಾವನೆ ಕೈಬಿಡಬೇಕು. ಇಲ್ಲಿನ ನೈಸರ್ಗಿಕವಾಗಿ ರೂಪುಗೊಂಡಿರುವ ಜೀವಿ–ಪರಿಸರ ವ್ಯವಸ್ಥೆಯನ್ನು ಹಾಗೂ ಸಮೃದ್ಧ ಜೀವವೈವಿಧ್ಯವನ್ನು ಸಂರಕ್ಷಿಸಬೇಕು ಎಂದು ಪರಿಸರ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ರಾಜ್ಯ ಜೀವವೈವಿಧ್ಯ ನಿರ್ವಹಣೆ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರನ್ನು ‘ನಮ್ಮ ಬೆಂಗಳೂರು ಪ್ರತಿಷ್ಠಾನ’ದ (ಎನ್‌ಬಿಎಫ್‌) ನೇತೃತ್ವದಲ್ಲಿ ಗುರುವಾರ ಭೇಟಿ ಮಾಡಿರುವ ಪರಿಸರ ಕಾರ್ಯಕರ್ತರು ಈ ಕುರಿತು ಮನವಿ ಸಲ್ಲಿಸಿದ್ದಾರೆ.

‘ವನ್ಯಜೀವಿ ಕಾರ್ಯಕರ್ತರು, ವನ್ಯಜೀವಿ ಛಾಯಾಗ್ರಾಹಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಪರಿಸರ ಕಾರ್ಯಕರ್ತರನ್ನು ಒಳಗೊಂಡ ತಂಡವು ಸಿಂಗನಾಯಕನಹಳ್ಳಿ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿನ ಭೌಗೋಳಿಕ ಪರಿಸರದ ಅಧ್ಯಯನ ನಡೆಸಿದೆ. ಇಲ್ಲಿ ಕಿರು ಅರಣ್ಯದಂತಹ ಪ್ರದೇಶ ರೂಪುಗೊಂಡಿದ್ದು, ಹಲವಾರು ಹಕ್ಕಿಗಳಿಗೆ ನೆಲೆ ಕಲ್ಪಿಸಿದೆ. ಇಲ್ಲಿ ಕಂಡುಬಂದಪತಂಗಗಳು ಹಾಗೂ ಚಿಟ್ಟೆಗಳು, ಹುತ್ತಗಳು, ಹಕ್ಕಿಗೂಡುಗಳು, ಬಿಲಗಳು, ಇಲ್ಲಿನ ಸಮೃದ್ಧ ಜೀವವೈವಿಧ್ಯ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತವೆ’ ಎಂದು ಪರಿಸರ ಕಾರ್ಯಕರ್ತರು ಮಂಡಳಿಯ ಗಮನಕ್ಕೆ ತಂದಿದ್ದಾರೆ.

ADVERTISEMENT

‘ಈ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನರಿಯ ಕಳೇಬರ ಪತ್ತೆಯಾಗಿತ್ತು. ವನ್ಯಜೀವಿ ಕಾಯ್ದೆಯಡಿ ವಿಶೇಷ ಸಂರಕ್ಷಣೆ ಇರುವ ನವಿಲುಗಳು ಇಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿವೆ. ಈ ಕಿರು ಕಾಡು ಕೇವಲ ವನ್ಯಜೀವಿಗಳಿಗೆ ಅಷ್ಟೇ ಅಲ್ಲ, ಅಕ್ಕ ಪಕ್ಕದ ಗ್ರಾಮಗಳ ಜಾನುವಾರುಗಳ ಮೇವಿನ ತಾಣವೂ ಹೌದು’ ಎಂದೂ ಅವರು ಪ್ರತಿಪಾದಿಸಿದ್ದಾರೆ.

‘ಈ ಪ್ರದೇಶದಲ್ಲಿ ಸಾವಿರಕ್ಕೂ ಅಧಿಕ ಜಾನುವಾರುಗಳನ್ನು ಮೇಯಿಸಲಾಗುತ್ತಿದೆ. ಆಸುಪಾಸಿನ ಗ್ರಾಮಸ್ಥರು ತಮ್ಮ ಗೋವುಗಳ ಮೇವಿಗಾಗಿ ಈ ಸ್ಥಳವನ್ನು ದಶಕಗಳಿಂದ ನೆಚ್ಚಿಕೊಂಡಿದ್ದಾರೆ. ಅವರ ಪ್ರಕಾರ 30– 40 ವರ್ಷಗಳಿಂದಲೂ ಇಲ್ಲಿ ಮರಗಳು ಹೇರಳವಾಗಿವೆ. ಅರಣ್ಯ ಇಲಾಖೆಯೂ ಇತ್ತೀಚಿನ ವರ್ಷಗಳನ್ನು ಇಲ್ಲಿ ಕೆಲವು ಸಸಿಗಳನ್ನು ನೆಟ್ಟು ಬೆಳೆಸಿದೆ. ಈ ಮರಗಳು ಕೆರೆಯ ಜಲಾನಯನ ಪ್ರದೇಶಕ್ಕೆ ರಕ್ಷಣೆ ಒದಗಿಸಿದ್ದಲ್ಲದೇ ಅಂತರ್ಜಲ ಹೆಚ್ಚಳಕ್ಕೂ ಕಾರಣವಾಗಿದೆ. ಆಸುಪಾಸಿನ ಗ್ರಾಮಗಳ ಜೀವಿ–ಪರಿಸರ ವ್ಯವಸ್ಥೆ ಕಾಪಾಡುವುದಕ್ಕೂ ನೆರವಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

‘ಇಲ್ಲಿನ ಪರಿಸರ ವ್ಯವಸ್ಥೆಯನ್ನು ಉಳಿಸಿಕೊಂಡೇ ಕೆರೆ ಪುನರುಜ್ಜೀವನ ಕಾರ್ಯ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡುವಂತೆ ಕೋರಿದ್ದೇವೆ. ಇದಕ್ಕೆ ಜೀವವೈವಿಧ್ಯ ನಿರ್ವಹಣೆ ಮಂಡಳಿ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಎನ್‌ಬಿಎಫ್‌ ಪ್ರಧಾನ ವ್ಯವಸ್ಥಾಪಕ ವಿನೋದ್‌ ಜೇಕಬ್‌ ತಿಳಿಸಿದ್ದಾರೆ.

**
ಕೆರೆ ಪುನರುಜ್ಜೀವನಕ್ಕೆ ನಮ್ಮ ವಿರೋಧವಿಲ್ಲ. ಸ್ಥಳೀಯ ರೈತರ ಬೆಳೆಗೆ ನೀರಿನ ಅಗತ್ಯ ಇರುವುದೂ ನಿಜ. ಆದರೆ, ಇದಕ್ಕಾಗಿ ಇಲ್ಲಿನ ಜೀವಿ–ಪರಿಸರ ವ್ಯವಸ್ಥೆ ನಾಶಪಡಿಸುವುದು ತರವಲ್ಲ.
-ವಿನೋದ್‌ ಜೇಕಬ್‌, ಪ್ರಧಾನ ವ್ಯವಸ್ಥಾಪಕ, ಎನ್‌ಬಿಎಫ್‌

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.