ADVERTISEMENT

ಸವಿತಾ ಮಹರ್ಷಿ ಜಯಂತ್ಯುತ್ಸವ

ಪ್ರವರ್ಗ 1ರ ಅಡಿಯಲ್ಲಿ ಸಮಾಜ ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:14 IST
Last Updated 26 ಫೆಬ್ರುವರಿ 2020, 19:14 IST
ಸವಿತಾ ಮಹರ್ಷಿ ಪುತ್ಥಳಿ ಮೆರವಣಿಗೆ ನಡೆಯಿತು.
ಸವಿತಾ ಮಹರ್ಷಿ ಪುತ್ಥಳಿ ಮೆರವಣಿಗೆ ನಡೆಯಿತು.   

ಯಲಹಂಕ: ಸವಿತಾ ಸಮಾಜಕ್ಕೆ ಹಿಂದುಳಿದ ವರ್ಗದ ಅಡಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಮೂಲಕ ಸಮಾಜದ ಏಳಿಗೆಗೆ ಸರ್ಕಾರದ ಮಟ್ಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಸವಿತಾ ಸಮಾಜದ ಮುಖಂಡರು ಒತ್ತಾಯಿಸಿದರು.

ಯಲಹಂಕ ಉಪನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತ್ಯುತ್ಸವ, ತ್ಯಾಗರಾಜಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಆಗ್ರಹಿಸಿದರು.

‘ಸಮಾಜವನ್ನು 2ಎ ಅಡಿಯಲ್ಲಿ ಇತರೆ ಹಿಂದುಳಿದ ವರ್ಗ ಒಬಿಸಿ ಎಂದು ಗುರುತಿಸಿರುವುದರಿಂದ ಅನ್ಯಾಯ
ವಾಗಿದೆ. ಅಸಂಘಟಿತರಾದ ನಾವು, ಆರ್ಥಿಕವಾಗಿ ಹಿಂದುಳಿದಿದ್ದು, ಸಾಮಾಜಿಕವಾಗಿ ತಿರಸ್ಕಾರ ಮತ್ತು ತಾರತಮ್ಯಕ್ಕೆ ಒಳಗಾಗಿದ್ದೇವೆ. ಈ ದಿಸೆಯಲ್ಲಿ ಸರ್ಕಾರ, ಜನಾಂಗವನ್ನು ಪ್ರವರ್ಗ 1ರ ಅಡಿಯಲ್ಲಿ ಸೇರಿಸುವ ಮೂಲಕ ಪರಿಶಿಷ್ಟ ಜಾತಿ-ವರ್ಗಕ್ಕೆ ಸಿಗುತ್ತಿರುವ ಮೀಸಲಾತಿ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಶಾಸಕ ಎಸ್‌.ಆರ್‌. ವಿಶ್ವನಾಥ್ ಮಾತನಾಡಿ, ‘ಸವಿತಾ ಸಮುದಾಯ, ಮಡಿವಾಳ ಜನಾಂಗ ಸೇರಿದಂತೆ ಸಮಾಜದಲ್ಲಿ ತೀರಾ ಹಿಂದುಳಿದ ಸಮುದಾಯಗಳ ಏಳಿಗೆಗಾಗಿ ಯಲಹಂಕ ತಾಲ್ಲೂಕು ವ್ಯಾಪ್ತಿಯಲ್ಲಿ ಭೂಮಿ ನೀಡುವ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಮತ್ತೊಮ್ಮೆ ಚರ್ಚಿಸಿ, ಶೀಘ್ರ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು. ಜನಾಂಗಕ್ಕೆ ಹಿಂದುಳಿದ ವರ್ಗದ ಅಡಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಸರ್ಕಾರದ ಗಮನ ಸೆಳೆಯುತ್ತೇನೆ’ ಎಂದು ಭರವಸೆ ನೀಡಿದರು.

ಕುಂಚೂರು ಸವಿತಾಪೀಠದ ಶ್ರೀಧರಾನಂದ ಸ್ವಾಮೀಜಿ ಮಾತನಾಡಿ, ‘ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜದ ಏಳಿಗೆಗಾಗಿ ಸರ್ಕಾರವು ಇತರೆ ಸಮುದಾಯದ ಪೀಠಗಳಿಗೆ ನೀಡುವಂತೆ ಉದಾರ ದೇಣಿಗೆ ಹಾಗೂ ಭೂಮಿ ನೀಡಬೇಕು’ ಎಂದು ಮನವಿ ಮಾಡಿದರು.

ತಹಶೀಲ್ದಾರ್ ಎನ್.ರಘುಮೂರ್ತಿ, ಜಿಲ್ಲಾಪಂಚಾಯಿತಿ ಸದಸ್ಯ ಕೆ.ರಮೇಶ್, ಬಿಬಿಎಂಪಿ ಸದಸ್ಯರಾದ ಎಂ.ಸತೀಶ್, ನೇತ್ರ ಪಲ್ಲವಿ, ಸವಿತಾ ಸಮಾಜದ ಯಲಹಂಕ ಕ್ಷೇತ್ರದ ಅಧ್ಯಕ್ಷ ವಿ.ಲಕ್ಷ್ಮೀನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.