ADVERTISEMENT

ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ: ಭೂಸ್ವಾಧೀನ ಕ್ರಮದ ವರದಿಗೆ ‘ಸುಪ್ರೀಂ’ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 19:18 IST
Last Updated 29 ಸೆಪ್ಟೆಂಬರ್ 2021, 19:18 IST
   

ನವದೆಹಲಿ: ಡಾ.ಶಿವರಾಮ ಕಾರಂತ ಬಡಾವಣೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಕುರಿತು2 ವಾರಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಬಡಾವಣೆಯನ್ನು ರೂಪಿಸಲು ಗುರುತಿಸಲಾದ ಭೂಮಿಯ ಕೆಲವು ಭಾಗದ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿಲ್ಲ ಎಂದು 2021ರ ಆಗಸ್ಟ್ 30ರಂದು ಬಿಡಿಎ ಸಲ್ಲಿಸಿರುವ ಯೋಜನೆಯ ವರದಿಯಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಬಡಾವಣೆಯ ಅಭಿವೃದ್ಧಿ ಹಾಗೂ ಸಂಪರ್ಕಕ್ಕೆ ಅಡ್ಡಿ ಉಂಟಾಗಲಿದೆ ಎಂದು ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ನೇತೃತ್ವದ ಪೀಠ ಹೇಳಿದೆ.

ಮುಂದಿನ ವಿಚಾರಣೆ ವೇಳೆ ವೈಯಕ್ತಿಕವಾಗಿ ಹಾಜರಿರುವಂತೆ ಬಿಡಿಎ ಆಯುಕ್ತರಿಗೆ ಸೂಚಿಸಿದ ಪೀಠವು, ಬಡಾವಣೆಯ ಸ್ವಾಧೀನ ಪ್ರಕ್ರಿಯೆಯಿಂದ ಹೊರತಾದ ಭೂಮಿಯ ಸಂಪೂರ್ಣ ವಿವರವನ್ನು 2 ವಾರಗಳಲ್ಲಿ ಸಲ್ಲಿಸಬೇಕು, ಈ ಭೂಮಿಯ ಸ್ವಾಧೀನ ಪ್ರಕ್ರಿಯೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಎಂದು ತಾಕೀತು ಮಾಡಿದೆ.

ADVERTISEMENT

ಸ್ವಾಧೀನ ಪ್ರಕ್ರಿಯೆಯಿಂದ ಹೊರತಾಗಿರುವ ಜಮೀನಿನ ವಿವರವನ್ನು ಬಿಡಿಎದಿಂದ ಸ್ವೀಕರಿಸಿದ 4 ವಾರಗಳೊಳಗೆ, ಭೂಸ್ವಾಧೀನ ಪ್ರಕ್ರಿಯೆಗಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸುವಂತೆಯೂ ಇದೇ ವೇಳೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಪೀಠ, ಪೆರಿಫೆರಲ್ ವರ್ತುಲ ರಸ್ತೆಯ ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ಬಿಡಿಎ ಆಯುಕ್ತರಿಗೆ ಹೇಳಿದೆ.

ಇದೇ ಜಮೀನಿನ ಸ್ವಲ್ಪ ಭಾಗವನ್ನು ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರವು 2013ರ ಸೆಪ್ಟೆಂಬರ್ 20ರಂದು ಅಧಿಸೂಚನೆ ಹೊರಡಿಸಿದ್ದರೂ, ಇದುವರೆಗೆ ಅಭಿವೃದ್ಧಿ ಕಾರ್ಯ ಆರಂಭವಾಗಿಲ್ಲ. ಕಾಮಗಾರಿ ನಡೆಯದ್ದರಿಂದ ಸಮರ್ಪಕ ಪರಿಹಾರ ಪಡೆಯುವುದಕ್ಕೆ ಅಡ್ಡಿಯಾಗಿದೆ ಎಂದು ದೂರಿ ಜಮೀನಿನ ಮಾಲೀಕರು ಸಲ್ಲಿಸಿರುವ ಮೇಲ್ಮನವಿಯ ಕುರಿತೂ ಪೀಠ ಗಮನಹರಿಸಿತು.

ಪೆರಿಫೆರಲ್ ವರ್ತುಲ ರಸ್ತೆಯ ನಿರ್ಮಾಣವು ಭಾರಿ ವೆಚ್ಚದ ಯೋಜನೆ ಆಗಿರುವುದರಿಂದ, ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕು. ಈ ಸಂಬಂಧ ನಿಯಮಿತವಾಗಿ ಮಂಡಳಿ ಸಭೆಗಳನ್ನು ನಡೆಸಬೇಕು ಎಂದೂ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಬಿಡಿಎಗೆ ಸೂಚಿಸಿದೆ.

ಅಧಿಕಾರಿ ವರ್ಗಾವಣೆ ಕ್ರಮಕ್ಕೆ ಆಕ್ರೋಶ

ನವದೆಹಲಿ: ಡಾ.ಶಿವರಾಮ ಕಾರಂತ ಬಡಾವಣೆಯ ಕಾಮಗಾರಿ ಪೂರ್ಣಗೊಳ್ಳುವವರೆಗೆ ಬಿಡಿಎ ಅಧಿಕಾರಿಗಳನ್ನು ವರ್ಗಾವಣೆ ಮಾಡದಂತೆ ನೀಡಲಾದ ನಿರ್ದೇಶನ ಪಾಲಿಸದಿರುವುದಕ್ಕೆ ನ್ಯಾಯಪೀಠವು ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿತು.

‘ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲೇ ಬಡಾವಣೆಯ ಅಭಿವೃದ್ಧಿ ಕೆಲಸ– ಕಾರ್ಯಗಳು ನಡೆಯಲಿ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಬಂಧಿಸಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಕೂಡದು’ ಎಂದು ನ್ಯಾಯಪೀಠವು ಆಗಸ್ಟ್ 19ರಂದು ಆದೇಶಿಸಿತ್ತು.

ಆದರೆ, ಅದನ್ನು ಧಿಕ್ಕರಿಸಿದ್ದ ರಾಜ್ಯ ಸರ್ಕಾರ, ಬಿಡಿಎ ಎಂಜಿನಿಯರಿಂಗ್ ಸದಸ್ಯ ಡಾ.ಎಚ್.ಆರ್. ಶಾಂತರಾಜಣ್ಣ ಅವರನ್ನು ಗೋರೂರಿನ ಹೇಮಾವತಿ ಯೋಜನಾ ವಲಯದ ಮುಖ್ಯ ಎಂಜಿನಿಯರ್‌ ಹುದ್ದೆಗೆ ವರ್ಗಾವಣೆ ಮಾಡಿ ಆಗಸ್ಟ್‌ 30ರಂದು ಆದೇಶಿಸಿತ್ತು.

ಈ ಕ್ರಮದ ಕುರಿತು ವಿಚಾರಣೆ ವೇಳೆ ನ್ಯಾಯಪೀಠವು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಮಧ್ಯ ಪ್ರವೇಶಿಸಿದ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಸರ್ಕಾರದಿಂದ ಆಗಿರುವ ತಪ್ಪನ್ನು ಸರಿಪಡಿಸುವುದಾಗಿ ಹೇಳಿದರಲ್ಲದೆ, ಅಧಿಕಾರಿಯನ್ನು ಒಂದು ದಿನದೊಳಗೆ ಮೂಲ ಸ್ಥಾನಕ್ಕೆ ಮರು ವರ್ಗಾವಣೆ ಮಾಡಲಾಗುವುದು ಎಂದು ನ್ಯಾಯಾಪೀಠಕ್ಕೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.