ಶಾಲೆ– ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ಬೆಂಗಳೂರು ನಗರವು ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟವಾಗಿದೆ’ ಎಂದು ಆರ್ಚ್ ಬಿಷಪ್ ಪೀಟರ್ ಮಚಾಡೊ ಹೇಳಿದರು.
ಶ್ರೀರಾಮಪುರದಲ್ಲಿರುವ ‘ಭಾರತೀಯ ವಿದ್ಯಾಭವನ ಬಿಬಿಎಂಪಿ ಪಬ್ಲಿಕ್ ಶಾಲೆ’ಯಲ್ಲಿ ಭಾರತೀಯ ವಿದ್ಯಾಭವನ, ವಿವಿಧ ದಾನಿಗಳ ನೆರವಿನಿಂದ ನಿರ್ಮಿಸಿರುವ ‘ಸಂಭ್ರಮ ನೂತನ ಶಾಲಾ ಸಭಾಂಗಣ’ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಮಹಾನಗರ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನಕ್ಕಷ್ಟೇ ಪ್ರಸಿದ್ಧಿಯಾಗಿಲ್ಲ. ಮಾನವತೆಗೂ ಹೆಸರುವಾಸಿಯಾಗಿದೆ’ ಎಂದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಒಂದು ಕಾಲದಲ್ಲಿ ಕಲಿಕಾ ವಾತಾವರಣವೇ ಇರದಿದ್ದ ಈ ಶಾಲೆಯನ್ನು ಭಾರತೀಯ ವಿದ್ಯಾಭವನವು ದಾನಿಗಳ ಸಹಾಯದಿಂದ ಉತ್ತಮವಾಗಿ ರೂಪಿಸಿದೆ. ಇಲ್ಲಿ ಶೈಕ್ಷಣಿಕ ಗುಣಮಟ್ಟ ಉತ್ಕೃಷ್ಟವಾಗಿದೆ. ಪ್ರತಿವರ್ಷ ಹಲವರು ಈ ಶಾಲೆಯಲ್ಲಿ ಸೀಟು ಕೊಡಿಸಿ ಎಂದು ಒತ್ತಾಯಿಸುತ್ತಾರೆ’ ಎಂದು ಹೇಳಿದರು.
ವಿದ್ಯಾಭವನದ ಅಧ್ಯಕ್ಷ ವಕೀಲ ಕೆ.ಜಿ.ರಾಘವನ್ ಮಾತನಾಡಿ, ‘ಜೀವನದಲ್ಲಿ ಕೆಲವು ಅವಕಾಶಗಳು ಬರುತ್ತವೆ. ಅವುಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು. ಅವಕಾಶಗಳು ಸಮಾಜದ ಎಲ್ಲರಿಗೂ ಸಿಗುವಂತಾಗಬೇಕು’ ಎಂದು ಹೇಳಿದರು.
ಇದೇ ವೇಳೆ, ಶಾಲೆಯ ಕೊಠಡಿ ಮತ್ತು ಸುಸಜ್ಜಿತ ಸಭಾಂಗಣ ನಿರ್ಮಿಸಲು ₹2 ಕೋಟಿ ನೀಡಿದ ಉದ್ಯಮಿ ಸಿ.ಜಿ.ಜಾರ್ಜ್ ಥಾಮಸ್ ಮತ್ತು ಸಹೋದರರು ಹಾಗೂ ವಾಸ್ತುಶಿಲ್ಪಿ ವಿಶ್ವನಾಥ್ ಅವರನ್ನು ಗೌರವಿಸಲಾಯಿತು.
ಬೌದ್ಧ, ಕ್ರೈಸ್ತ, ಜೈನ, ಇಸ್ಲಾಂ, ಸಿಖ್ ಮತ್ತು ಹಿಂದೂ ಧಾರ್ಮಿಕ ಮುಖಂಡರು ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾಭವನದ ನಿರ್ದೇಶಕ ಎಚ್. ಎನ್. ಸುರೇಶ್ ವಂದಿಸಿದರು. ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ.ರಾವ್, ಕೆ. ಜೈರಾಜ್, ಅಭಿನವ ರವಿಕುಮಾರ್, ಸೀತಾರಾಮಚಂದ್ರ, ಕಮಲ್‌ಪಂತ್, ಖಜಾಂಚಿ ಪೀಯೂಶ್ ಜೈನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.