ADVERTISEMENT

ಕಲ್ಯಾಣ ಮಂಟಪದಲ್ಲೊಂದು ಶಾಲೆ ಮಾಡಿ

ವಿಧಾನಸೌಧದಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿದೆ

ಪೀರ್‌ ಪಾಶ, ಬೆಂಗಳೂರು
Published 29 ಅಕ್ಟೋಬರ್ 2018, 20:34 IST
Last Updated 29 ಅಕ್ಟೋಬರ್ 2018, 20:34 IST
ಮರಗಳ ನೆರಳಿನಲ್ಲಿ ಕುಳಿತು ಮಕ್ಕಳು ಕಲಿಯುತ್ತಿರುವುದು (ಎಡಚಿತ್ರ) ಕಲ್ಯಾಣ ಮಂಟಪದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಗಳು
ಮರಗಳ ನೆರಳಿನಲ್ಲಿ ಕುಳಿತು ಮಕ್ಕಳು ಕಲಿಯುತ್ತಿರುವುದು (ಎಡಚಿತ್ರ) ಕಲ್ಯಾಣ ಮಂಟಪದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಗಳು   

ಬೆಂಗಳೂರು: ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧದಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿದೆ ವಸಂತನಗರ. ಇಲ್ಲಿನ ಸರ್ಕಾರಿ ಶಾಲೆಯನ್ನು ಕಲ್ಯಾಣ ಮಂಟಪದಲ್ಲಿ ನಡೆಸಲಾಗುತ್ತಿದೆ.ಇದೇನಪ್ಪ ರಾಜಧಾನಿ ಕೇಂದ್ರದಲ್ಲೂ ಸರ್ಕಾರಿ ಶಾಲೆಗೆ ಕಟ್ಟಡದ ಬರವೇ ಎಂದು ನೀವು ಯೋಚಿಸಬಹುದು.

ಶಾಲೆಗೆ ಹೊಸ ಕಟ್ಟಡ ಕಟ್ಟುತ್ತಿದ್ದಾರೆ. ಹಾಗಾಗಿ ಮಂಟಪದಲ್ಲಿ ತಾತ್ಕಾಲಿಕವಾಗಿ ತರಗತಿಗಳನ್ನು ನಡೆಸುತ್ತಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಸಂಪಂಗಿ ರಾಮಸ್ವಾಮಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ತಗಡುಗಳನ್ನು ಜೋಡಿಸಿ, ತರಗತಿ
ಗಳನ್ನು ರೂಪಿಸಲಾಗಿದೆ. ಇಲ್ಲಿ ಒಂದು ತರಗತಿಯಲ್ಲಿ ಮಾಡುವ ಪಾಠ ಮತ್ತೊಂದು ತರಗತಿಯ ಮಕ್ಕಳಿಗೆ ಸ್ಪಷ್ಟವಾಗಿ ಕೇಳಿಸುತ್ತದೆ. ಪಕ್ಕದ ತರಗತಿಯ ಗಲಾಟೆಯೂ ಕಿವಿಗೆ ಬೀಳುತ್ತದೆ.

ADVERTISEMENT

1ರಿಂದ 7ನೇ ತರಗತಿ ವರೆಗಿನ ಕನ್ನಡ ಮತ್ತು ತಮಿಳು ಮಾಧ್ಯಮದ ಈ ಶಾಲೆಯಲ್ಲಿ 194 ಮಕ್ಕಳು ಕಲಿಯುತ್ತಿದ್ದಾರೆ. ಇದರಲ್ಲಿ 26 ವಿದ್ಯಾರ್ಥಿಗಳು ತಮಿಳು ಮಾಧ್ಯಮದವರು. ತರಗತಿಯಲ್ಲಿ ಕೂರಲು ಜಾಗ ಸಾಲದಾದಾಗ, ಮಕ್ಕಳ ಗಲಾಟೆಯಿಂದ ಪಾಠಕ್ಕೆ ಅಡಚಣೆ ಉಂಟಾದಾಗ, ಪಕ್ಕದಲ್ಲಿನ ಸಂಪಂಗಿ ರಾಮಸ್ವಾಮಿ ದೇವಾಲಯದ ಆವರಣದಲ್ಲಿ ಬೆಳೆದಿರುವ ಬೃಹದಾಕಾರದ ಮರಗಳ ಕೆಳಗೆ ಜಮಖಾನೆ ಹಾಸಿಕೊಂಡುಮಕ್ಕಳು ಕೂರುತ್ತಾರೆ. ಬೀಸುವ ತಂಗಾಳಿ, ಕೇಳಿಸುವ ಟ್ರಾಫಿಕ್‌ ಶಬ್ದದ ನಡುವೆಯೂ ಆದಷ್ಟು ಏಕಾಗ್ರತೆಯಿಂದ ಪಾಠ ಕೇಳುತ್ತಾರೆ.

ಮುಖ್ಯಶಿಕ್ಷಕರ ಕ್ಯಾಬಿನ್‌ ಅನ್ನುಪ್ರತಿ ಶನಿವಾರದಂದು ಕಂಪ್ಯೂಟರ್‌ ಕಲಿಕಾ ತರಗತಿಯಾಗಿ ಮಾರ್ಪಡಿಸಿಕೊಳ್ಳುತ್ತಾರೆ. ಸ್ವಯಂಸೇವಾ ಸಂಸ್ಥೆಗಳು ನೀಡಿರುವ 16 ಲ್ಯಾಪ್‌ಟಾಪ್‌ಗಳೊಂದಿಗೆ, ಶಾಲೆಯಲ್ಲಿನ ಕಂಪ್ಯೂಟರ್‌ನಲ್ಲಿ ಮಕ್ಕಳು ಕಲಿಯುತ್ತಾರೆ. ಇ–ಕಲಿಕೆಗೆ ಕಲರ್ಸ್‌ ಆಫ್‌ ಲೈಫ್‌, ಅಕ್ಷರ ಸ್ವಯಂ ಸೇವಾ ಸಂಸ್ಥೆಗಳು ಸಹ ಸಾಥ್‌ ನೀಡಿವೆ.

ಮಕ್ಕಳಿಗೆ ಜೀವನ ಕೌಶಲಗಳನ್ನು ಕಲಿಸಲು ಎಲ್‌ಎಕ್ಸ್‌ಎಲ್‌ ಕಂಪನಿ ಹಾಗೂ ಕ್ರೀಡೆ, ಸಂಗೀತ, ನೃತ್ಯ, ಕರಾಟೆ ಕಲಿಸಲು ಎಲ್ ಆ್ಯಂಡ್‌ ಟಿ ಕಂಪನಿ ಹೊರೆ ಹೊತ್ತಿವೆ. ಮಲ್ಲೇಶ್ವರದ ಮಹಿಳೆಯರ ಸಂಘ ಮಕ್ಕಳಿಗೆ ನೈತಿಕ ಮೌಲ್ಯಗಳ ಪಾಠ ಮಾಡಿಸುತ್ತಿದೆ.

‘ಮಕ್ಕಳ ಸರ್ವತೋಮುಖ ಕಲಿಕೆಗೆ 20 ಸ್ವಯಸೇವಾ ಸಂಸ್ಥೆಗಳು ಕೈ ಜೋಡಿಸಿವೆ.ಸರ್ಕಾರದಿಂದ ಶಿಕ್ಷಕರಿಗೆ ಸಂಬಳ ಮಾತ್ರ ಬರುತ್ತಿದೆ. ಉಳಿದ ಎಲ್ಲ ಸೌಲಭ್ಯಗಳನ್ನು ಸ್ವಯಂಸೇವಾ ಸಂಸ್ಥೆಗಳು, ಹಳೆಯ ವಿದ್ಯಾರ್ಥಿಗಳು ನೀಡಿದ್ದಾರೆ’ಎಂದು ಕೃತಜ್ಞ ಭಾವದಿಂದ ನೆನೆಯುತ್ತಾರೆ ಮುಖ್ಯ ಶಿಕ್ಷಕ ಕೆ.ವಿ.ಸುದರ್ಶನ್‌.


ಮೂರು ಅಂತಸ್ತಿನ ಹೊಸ ಕಟ್ಟಡ

ವಸಂತನಗರದಲ್ಲಿ 1930ರಲ್ಲಿ ಕಟ್ಟಿದ್ದ ಸರ್ಕಾರಿ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿತ್ತು. ಅದನ್ನು ಕೆಡವಲಾಗಿದೆ. ರೋಟರಿ ಆರ್ಚರ್ಡ್ಸ್‌
ನವರು ಹೊಸ ಕಟ್ಟಡ ನಿರ್ಮಿಸುತ್ತಿದ್ದಾರೆ.

ಅಂದಾಜು ₹6 ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡ ಕಟ್ಟುವ ಕೆಲಸ ಭರದಿಂದ ಸಾಗಿದೆ. ಇದರಲ್ಲಿ 24 ತರಗತಿ ಕೊಠಡಿಗಳು, ಗ್ರಂಥಾಲಯ, ಸಭಾಂಗಣ, ಕಚೇರಿ ಮತ್ತು ಸಿಬ್ಬಂದಿ ಕೊಠಡಿ ಇರಲಿವೆ. ಬಿಸಿಯೂಟಕ್ಕಾಗಿ ಅಡುಗೆ ಮತ್ತು ದಾಸ್ತಾನು ಕೋಣೆಯನ್ನೂ
ರೂಪಿಸಲಾಗುತ್ತಿದೆ.

ಶುಲ್ಕ ಕಟ್ಟಲು ಮೊತ್ತವಿಲ್ಲ

ಈ ಕಲ್ಯಾಣ ಮಂಟಪವನ್ನು ವಾಣಿಜ್ಯ ಬಳಕೆಯ ಕಟ್ಟಡವೆಂದು ಪಾಲಿಕೆ ಪರಿಗಣಿಸಿದೆ. ಹಾಗಾಗಿ ಪ್ರತಿತಿಂಗಳು ಸರಾಸರಿ ₹4,500 ನೀರಿನ ಶುಲ್ಕ ಮತ್ತು ₹1,500 ವಿದ್ಯುತ್‌ ಶುಲ್ಕ ಬರುತ್ತಿದೆ. ‘ಇದನ್ನು ಭರಿಸುವಷ್ಟು ಮೊತ್ತವು ಶಾಲಾಭಿವೃದ್ಧಿ ಸಮಿತಿಯ ಖಾತೆಯಲ್ಲಿ ಇಲ್ಲ. ಈ ಮೊತ್ತವನ್ನು ನೀಡಲು ಯಾವುದಾದರೂ ಸಂಸ್ಥೆಯವರು ಮುಂದೆ ಬರಲೆಂದು ಎದುರು ನೋಡುತ್ತಿದ್ದೇವೆ’ ಎಂದು ಮುಖ್ಯೋಪಾಧ್ಯಾಯರು ತಿಳಿಸಿದರು.

*ಶಾಲೆಯ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಒಂದು ವರ್ಷದೊಳಗೆ ಮುಗಿಯಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಶಾಲೆಯಲ್ಲಿ ಮಕ್ಕಳು ಕಲಿಯಲಿದ್ದಾರೆ.

-ಕೆ.ವಿ.ಸುದರ್ಶನ್‌, ಮುಖ್ಯೋಪಾಧ್ಯಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.