ಬೆಂಗಳೂರು: ಭೂ–ವಿದ್ಯಾದಾನ ಶಾಲಾ ಜಮೀನುಗಳ ಗೇಣಿದಾರರಿಗೆ ಡಿಸೆಂಬರ್ 31ರ ಒಳಗೆ ಭೂ ಒಡೆತನದ ಹಕ್ಕುಪತ್ರ ನೀಡದೇ ಇದ್ದರೆ ಹೊಸವರ್ಷದ ಮೊದಲ ದಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಭೂ–ವಿದ್ಯಾದಾನ ಶಾಲಾ ಜಮೀನುಗಳ ಗೇಣಿದಾರರು ನಿರ್ಧರಿಸಿದ್ದಾರೆ.
45 ವರ್ಷಗಳ ಹಿಂದಿನ ಕನ್ನಡಪರ ಹೋರಾಟದ ಯಶಸ್ಸಿನ ಬಗ್ಗೆ ಹಾಗೂ ಶಾಲಾ ಜಮೀನು ಗೇಣಿ ರೈತರ ಸಮಸ್ಯೆಯ ಬಗ್ಗೆ ಚರ್ಚಿಸಲು ಬುಧವಾರ ನಗರದಲ್ಲಿ ನಡೆದ ಗೇಣಿ ರೈತರ ಹೋರಾಟ ಸಮಿತಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
‘ಭೂಸುಧಾರಣಾ ಕಾಯ್ದೆ ಅನುಷ್ಠಾನಗೊಂಡಿದ್ದರೂ ಕೆಲವೆಡೆ ಶಾಲಾ ಜಮೀನು ಗೇಣಿ ಪದ್ಧತಿ ಮುಂದುವರಿದಿದೆ. ಈ ಪದ್ಧತಿಯನ್ನು ರದ್ದು ಮಾಡಿ, ಉಳುಮೆ ಮಾಡುತ್ತಿರುವವರಿಗೆ ಜಮೀನು ಮಂಜೂರು ಮಾಡಬೇಕು’ ಎಂದು ಸಮಿತಿಯ ಅಧ್ಯಕ್ಷ ಕಲ್ಲೂರು ಮೇಘರಾಜ ಆಗ್ರಹಿಸಿದರು.
ಭೂದಾನ ಚಳವಳಿಯ ಭಾಗವಾಗಿ ಶಿವಮೊಗ್ಗ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ಜಮೀನು ನೀಡಲಾಗಿತ್ತು. ಆದರೆ, ಅದನ್ನು ಶಾಲೆಗೆ ಬಳಸಿಕೊಳ್ಳುವ ಬದಲು ಗೇಣಿಗೆ ನೀಡಲಾಗಿದೆ. ಹಾಗಾಗಿ ರೈತರಿಗೆ ಮಾಲೀಕತ್ವದ ಹಕ್ಕು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ್, ‘ಶಾಲೆಗಳಿಗೆ ಯಾವುದೇ ತೊಂದರೆಯಾಗದಂತೆ ಗೇಣಿ ವ್ಯವಸ್ಥೆಯನ್ನು ಸರಿಪಡಿಸಬೇಕು’ ಎಂದು ಸಲಹೆ ನೀಡಿದರು.
ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ಮಾತನಾಡಿ, ‘ಇತಿಹಾಸದ ಜೊತೆಗೆ ಭವಿಷ್ಯವನ್ನು ರೂಪಿಸಲು ಸರ್ಕಾರ ಚಿಂತನೆ ನಡೆಸಬೇಕು. ಭಾಷಾ ನೀತಿಯಿಂದಾಗಿ ಮಕ್ಕಳು ಗೊಂದಲದಲ್ಲಿದ್ದಾರೆ. ರಾಜಕಾರಣದಲ್ಲಿ ಕೆಟ್ಟ ಭಾಷೆ ಬಳಕೆಯಾಗುತ್ತಿರುವುದು ಖಂಡನೀಯ’ ಎಂದರು.
ಸಮಾಜವಾದಿ ಮುಖಂಡ ಬಿ.ಆರ್. ಜಯಂತ್, ಸಮಿತಿಯ ಗೌರವ ಅಧ್ಯಕ್ಷ ಬಿ. ಸ್ವಾಮಿರಾವ್, ಕಲ್ಲನ್, ಪಾಣಿರಾಜಪ್ಪ, ಇ.ವಿ. ಸತ್ಯನಾರಾಯಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.