ADVERTISEMENT

ಆದಿಪುರಾಣದಲ್ಲಿಯೇ ವೈಜ್ಞಾನಿಕ ಚಿಂತನೆ: ಎಲ್‌.ಎನ್‌. ಮುಕುಂದರಾಜ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 22:00 IST
Last Updated 22 ಜನವರಿ 2026, 22:00 IST
ಎಲ್‌.ಎನ್‌. ಮುಕುಂದರಾಜ್‌
ಎಲ್‌.ಎನ್‌. ಮುಕುಂದರಾಜ್‌   

ಬೆಂಗಳೂರು: ‘ಕನ್ನಡ ಸಾಹಿತ್ಯವು ಅತ್ಯಂತ ವೈಜ್ಞಾನಿಕ ಹಾಗೂ ವೈಚಾರಿಕತೆಯಿಂದ ಕೂಡಿದ್ದು, ಆದಿಕವಿ ಪಂಪನ ಮೊದಲ ಕೃತಿ ‘ಆದಿಪುರಾಣ’ದಲ್ಲಿಯೇ ನಾವು ಇದನ್ನು ಕಾಣಬಹುದು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್‌ ಹೇಳಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ವಿಜ್ಞಾನ ಸಾಹಿತ್ಯ ಹಾಗೂ ಸಂವಹನ ಶಿಬಿರದಲ್ಲಿ ಅವರು ಗುರುವಾರ ಮಾತನಾಡಿದರು.

ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ರಾಜಾಸಾಬ್, ಕನ್ನಡದಲ್ಲಿ ರಚನೆಯಾದ ವಿಜ್ಞಾನ ಸಾಹಿತ್ಯದ ಪ್ರೇರಣೆ, ಕುವೆಂಪು ಮುಂತಾದವರ ಸಾಹಿತ್ಯದಲ್ಲಿನ ವಿಜ್ಞಾನದ ಎಳೆಗಳು, ವೈದ್ಯ ಸಾಹಿತ್ಯ ಮತ್ತು ವಿಜ್ಞಾನ ಸಾಹಿತ್ಯಕ್ಕೆ ಸಂದ ಪ್ರಶಸ್ತಿಗಳು ಪ್ರಮುಖ ಕೃತಿಗಳು ಹಾಗೂ ಸಾಹಿತ್ಯಕಾರರ ಕುರಿತು ಮಾತನಾಡಿದರು. 

ADVERTISEMENT

ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಅವರು ಶಿಬಿರವನ್ನು ಉದ್ಘಾಟಿಸಿದರು. ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 70 ಜನರು ಶಿಬಿರಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರಾದ ಡಾ. ವಸುಂಧರಾ ಭೂಪತಿ ಅವರು ಶಿಬಿರದ ನಿರ್ದೇಶಕರಾಗಿ, ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸುಮಾ ಸತೀಶ್, ವಿಜ್ಞಾನ ಅಕಾಡೆಮಿಯ ಸಿಇಒ ಆನಂದ್ ಅವರು ಶಿಬಿರದ ಸಂಚಾಲಕರಾಗಿದ್ದರು. ‘ನಮ್ಮ ಆರೋಗ್ಯ ನಮ್ಮಿಂದಲೇ’ ಎಂಬ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. 

ವಿವಿಧ ವಿಷಯಗಳ ಕುರಿತ ಗೋಷ್ಠಿಗಳಲ್ಲಿ ಎಂ.ಎಸ್. ಆಶಾದೇವಿ, ಗುರುರಾಜ ಎಸ್. ದಾವಣಗೆರೆ, ಕೆ.ಎನ್. ಗಣೇಶಯ್ಯ ಮತ್ತು ನೇಮಿಚಂದ್ರ ಅವರು ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.