ADVERTISEMENT

ಸ್ಕೂಟರ್‌ನಲ್ಲಿ 16 ಸಾವಿರ ಕೆ.ಜಿ ಅಕ್ಕಿ ಸಾಗಿಸಿದರು!

ಭಾರತೀಯ ಆಹಾರ ನಿಗಮದಲ್ಲಿ ಬೋಗಸ್ ಲೆಕ್ಕ: ಸಿಬಿಐನಿಂದ ತನಿಖೆ

ಶೆಮಿಜ್‌ ಜಾಯ್‌
Published 11 ಆಗಸ್ಟ್ 2019, 19:35 IST
Last Updated 11 ಆಗಸ್ಟ್ 2019, 19:35 IST
   

ನವದೆಹಲಿ: ಆ್ಯಕ್ಟಿವಾ ಸ್ಕೂಟರ್‌ನಲ್ಲಿ 16,300 ಕಿಲೋ ಅಕ್ಕಿ ಸಾಗಿಸಲು ಸಾಧ್ಯವೇ? ಮಣಿಪುರ ಮೂಲದ ಸಾಗಣೆದಾರರು ಇದನ್ನು ಮಾಡಿದ್ದಾರೆ.ಇದೊಂದೇ ಅಲ್ಲ, ಮಾರುತಿ ವ್ಯಾನ್‌ನಲ್ಲಿ 9,987 ಕೆ.ಜಿ., ಬಸ್‌ನಲ್ಲಿ 20,791 ಕೆ.ಜಿ., ನೀರಿನ ಟ್ಯಾಂಕರ್‌ನಲ್ಲಿ 20,671 ಕೆ.ಜಿ., ಅಕ್ಕಿಯನ್ನು ಸಾಗಣೆ ಮಾಡಲಾಗಿದೆ.

ಹೀಗಿದ್ದೂ, ₹84.98 ಲಕ್ಷ ಮೌಲ್ಯದ 2,901 ಕ್ವಿಂಟಲ್ ಅಕ್ಕಿಯು ನಿಗದಿತ ಸ್ಥಳಕ್ಕೆ ತಲುಪಿಲ್ಲ ಎಂಬ ಅಂಶ ವಿಚಾರಣೆಯಿಂದ ಬಯಲಾಗಿದ್ದು,ಸಾಗಣೆದಾರರು ಹಾಗೂ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ನಾಲ್ವರು ಅಧಿಕಾರಿಗಳು ಸಿಬಿಐ ತನಿಖೆ ಎದುರಿಸುತ್ತಿದ್ದಾರೆ.

2016ರ ಮಾರ್ಚ್ 7ರಿಂದ 23ರ ಅವಧಿಯಲ್ಲಿ ಅಸ್ಸಾಂನ ಶಾಲ್‌ಚಾಪರಾದಿಂದ ರವಾನಿಸಲಾದ 9,091 ಕ್ವಿಂಟಲ್‌ ಅಕ್ಕಿಯ ಪೈಕಿ ಮೂರನೇ ಒಂದರಷ್ಟು ಇಂಫಾಲದ ಕೊಯಿರೆಂಗಿಯನ್ನು ತಲುಪಿಲ್ಲ ಎಂಬ ಅಂಶ ಎಫ್‌ಸಿಐ ಅಧಿಕಾರಿಗಳಿಗೆ ತಿಳಿಯುವ ಮೂಲಕ ಪ್ರಕರಣ ಬೆಳಕಿಗೆ ಬಂದಿತು. ಅಕ್ಕಿ ತಲುಪದಿದ್ದರೂ, ಸಾಗಣೆದಾರ ಜಾನ್ಸನ್ ಕೆಶಿಂಗ್ ಅವರು ₹9.71 ಲಕ್ಷ ಬಿಲ್‌ ಮಾಡಿದ್ದರು.

ADVERTISEMENT

ಸಾಗಣೆ ಜವಾಬ್ದಾರಿ ಹೊತ್ತಿದ್ದ ಇಂಫಾಲ ಮೂಲದ ಝೆನಿತ್ ಎಂಟರ್‌ಪ್ರೈಸಸ್‌ಗೆ ಸೇರಿದ 57 ಟ್ರಕ್‌ಗಳಿಗೆ ಯಾವ ಮಾರ್ಗದಲ್ಲಿ ಮತ್ತು ಯಾವ ಸಮಯದಲ್ಲಿ ಸಾಗಣೆ ಮಾಡಬೇಕು ಎಂಬ ಪರ್ಮಿಟ್ ನೀಡಲಾಗಿತ್ತು. ದಾಖಲೆಗಳ ಪ್ರಕಾರ, 9,091 ಕ್ವಿಂಟಲ್ ಅಕ್ಕಿಯನ್ನು 2016ರ ಮೇ 11ರಿಂದ ಮೇ 24ರ ಅವಧಿಯಲ್ಲಿ ಬಟವಾಡೆ ಮಾಡಲಾಗಿದೆ.

ಸಿಬಿಐ ಶುಕ್ರವಾರ ದಾಖಲಿಸಿಕೊಂಡಿರುವ ಎಫ್‌ಐಆರ್ ಪ್ರಕಾರ, 2,901 ಕ್ವಿಂಟಲ್ ಬಟವಾಡೆ ಕೇವಲ ಕಾಗದದ ಮೇಲೆ ನಮೂದಾಗಿದೆ.

ಶಾಲ್‌ಚಾಪರಾ ಹಾಗೂ ಕೊಯಿರೆಂಗಿಯ ತಲಾ ಇಬ್ಬರು ಅಧಿಕಾರಿಗಳು ದಾಖಲೆಗಳನ್ನು ತಿರುಚಿ, ಹಣ ದುರುಪಯೋಗಕ್ಕೆ ನೆರವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಶಾಲ್‌ಚಾಪರಾದ ಅಧಿಕಾರಿಗಳಾದ ಅಶೋಕ್ ಕುಮಾರ್ ಪೌಲ್ ಮತ್ತು ರಜನೀಶ್ ಕುಮಾರ್ ಗುಪ್ತಾ ಅವರು ಅಕ್ಕಿಯನ್ನು ಟ್ರಕ್‌ಗಳಿಗೆ ತುಂಬದಿದ್ದರೂ 16 ಪರ್ಮಿಟ್‌ಗಳನ್ನು ನೀಡಿದ್ದಾರೆ. ಲೋಡಿಂಗ್‌ ವೇಳೆ ಖುದ್ದು ಹಾಜರಿದ್ದೆ ಎಂಬುದಾಗಿ ಸಾಗಣೆ ಸಿಬ್ಬಂದಿ ಜಾನ್ಸನ್ ಸಹಿ ಮಾಡಿದ್ದಾರೆ. ಕೊಯುರೆಂಗಿಯ ಅಧಿಕಾರಿಗಳಾದ ರೋಹಿಣಿ ಕುಮಾರ್, ಎನ್.ಸುಧೀರ್ ಸಿಂಗ್ ಅವರೂ ವಂಚನೆ ಎಸಗಿದ್ದಾರೆಎಂದು ಎಫ್‌ಐಆರ್ ಉಲ್ಲೇಖಿಸಿದೆ.

ಮಾರ್ಗಮಧ್ಯೆ ಟ್ರಕ್ ಕೆಟ್ಟಿದ್ದರಿಂದ ಬೇರೆ ವಾಹನಗಳಲ್ಲಿ ಸಾಗಿಸಲಾಗಿದೆಎಂದು ಸಾಗಣೆ ಸಿಬ್ಬಂದಿ ಸೊಯಿಬಮ್ ಸರ್ಜಿತ್ ಸಿಂಗ್ ಅವರು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಂಚನೆ, ಮೋಸ, ದಾಖಲೆ ತಿರುಚಿದ್ದು ಸೇರಿದಂತೆ ವಿವಿಧ ಆರೋಪಗಳಡಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.