ADVERTISEMENT

‘ಸೌರ ವಿದ್ಯುತ್ ಶಕ್ತಿಯನ್ನು ಹೆಚ್ಚು ಬಳಸಿ’

ಸೆಲ್ಕೋ ಆಯೋಜಿಸಿದ್ದ ಎರಡು ದಿನಗಳ ದಕ್ಷಿಣ ದೇಶಗಳ ಜಾಗತಿಕ ಸಮಾವೇಶಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 14:37 IST
Last Updated 28 ನವೆಂಬರ್ 2022, 14:37 IST
ಎರಡು ದಿನಗಳ ಜಾಗತಿಕ ಸುಸ್ಥಿರ ಅಭಿವೃದ್ಧಿಯಲ್ಲಿ ಪರಿಸರ ವ್ಯವಸ್ಥೆಯ ಕುರಿತು ದಕ್ಷಿಣ ದೇಶಗಳ ಜಾಗತಿಕ ಸಮಾವೇಶವನ್ನು ಸೋಮವಾರ ಉದ್ಘಾಟನೆ ಮಾಡಲಾಯಿತು.
ಎರಡು ದಿನಗಳ ಜಾಗತಿಕ ಸುಸ್ಥಿರ ಅಭಿವೃದ್ಧಿಯಲ್ಲಿ ಪರಿಸರ ವ್ಯವಸ್ಥೆಯ ಕುರಿತು ದಕ್ಷಿಣ ದೇಶಗಳ ಜಾಗತಿಕ ಸಮಾವೇಶವನ್ನು ಸೋಮವಾರ ಉದ್ಘಾಟನೆ ಮಾಡಲಾಯಿತು.   

ಬೆಂಗಳೂರು: ‘ಪಳೆಯುಳಿಕೆ ಇಂಧನಕ್ಕಿಂತ ಅಗ್ಗದಲ್ಲಿ ದೊರೆಯುವ ಸೌರ ವಿದ್ಯುತ್ ಶಕ್ತಿಯನ್ನು ಹೆಚ್ಚು ಬಳಸಬೇಕು. ಇಲ್ಲದಿದ್ದರೆ ಜನಸಾಮಾನ್ಯರ ಜೀವನ ದುಬಾರಿಯಾಗಲಿದೆ’ ಎಂದು ಅಂತರರಾಷ್ಟ್ರೀಯ ಸೌರ ವಿದ್ಯುತ್‌ ಒಕ್ಕೂಟದ (ಐಎಸ್‌ಎ) ಮಹಾನಿರ್ದೇಶಕ ಅಜಯ್ ಮಾಥೂರ್ ಹೇಳಿದರು.

ಸೆಲ್ಕೋ ಫೌಂಡೇಷನ್‌ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ಸಹಯೋಗದಲ್ಲಿ ನಡೆಯುತ್ತಿರುವ ‘ಎರಡು ದಿನಗಳ ಜಾಗತಿಕ ಸುಸ್ಥಿರ ಅಭಿವೃದ್ಧಿಯಲ್ಲಿ ಪರಿಸರ ವ್ಯವಸ್ಥೆಯ ಕುರಿತು ದಕ್ಷಿಣ ದೇಶಗಳ ಜಾಗತಿಕ ಸಮಾವೇಶ–2022’ರಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ವಿಕೇಂದ್ರೀಕೃತ ನವೀಕರಿಸಬಹುದಾದ ಸುಸ್ಥಿರ ಇಂಧನವವನ್ನು ಬಳಸಿಕೊಂಡು ಆರೋಗ್ಯ ಮತ್ತು ಜೀವನೋಪಾಯ ಕ್ಷೇತ್ರದಲ್ಲಿ ಸಮಗ್ರ, ಸಮನ್ವಯ ರೀತಿಯ ಅಭಿವೃದ್ಧಿಯನ್ನು ಸಾಧಿಸಬೇಕು. ಭಾರತ ಮತ್ತು ದಕ್ಷಿಣ ಆಫ್ರಿಕಾದ ದೇಶಗಳಲ್ಲಿ ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ 20 ಸ್ಟಾರ್ಟ್‌ಅಪ್‌ ಯೋಜನೆಗಳಿಗೆ ಪ್ರೋತ್ಸಾಹ ನೀಡಲು ಅಂತರರಾಷ್ಟ್ರೀಯ ಸೌರಶಕ್ತಿ ಸಂಘಟನೆ ನಿರ್ಧರಿಸಿದೆ. ಆಸಕ್ತರು 2023ರ ಮಾರ್ಚ್‌ 31ರೊಳಗೆ ನೋಂದಾಯಿಸಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ADVERTISEMENT

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ‘ಸೆಲ್ಕೋ ಫೌಂಡೇಷನ್‌ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ರಾಯಚೂರು ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸೌರಶಕ್ತಿ ಆಧಾರಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್‌ ಮಾಡಲು ಸೌರಶಕ್ತಿಯನ್ನು ಬಳಸಿಕೊಳ್ಳುವ ಅಗತ್ಯವಿದೆ’ ಎಂದರು.

ಸೆಲ್ಕೋ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಹಂದೆ ಮಾತನಾಡಿ, ‘ಏಷ್ಯಾ ಉಪಖಂಡ ಮತ್ತು ಆಫ್ರಿಕಾ ದೇಶಗಳ ಜನರ ಆರೋಗ್ಯ, ಜೀವನೋಪಾಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಹಿಂದೆ ಇದ್ದಾರೆ. ಈ ದೇಶಗಳ ಜನರ ಜೀವನ ಮಟ್ಟವನ್ನು ಸುಧಾರಿಸುವ ಕೆಲಸವಾಗಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.