ADVERTISEMENT

ಮೈ ಮೇಲೆ ದೇವರು ಬಂದಂತೆ ನಟಿಸಿ ವಂಚನೆ

ಚಾಮರಾಜಪೇಟೆಯ ದೇವಸ್ಥಾನದಲ್ಲಿ ಮಹಿಳೆಯ ಚಿನ್ನಾಭರಣ, ನಗದು ಕದ್ದೊಯ್ದರು

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 19:37 IST
Last Updated 29 ಜೂನ್ 2019, 19:37 IST
   

ಬೆಂಗಳೂರು: ಚಾಮರಾಜಪೇಟೆಯ ದೇವಸ್ಥಾನವೊಂದರ ಆವರಣದಲ್ಲೇ ಮೈ ಮೇಲೆ ದೇವರು ಬಂದಂತೆ ನಟಿಸಿದ್ದ ಅಪರಿಚಿತರಿಬ್ಬರು, ಮಹಿಳೆಯೊಬ್ಬರ ಚಿನ್ನಾಭರಣ ಹಾಗೂ ನಗದು ಕದ್ದೊಯ್ದಿದ್ದಾರೆ.

ಆ ಸಂಬಂಧ ಚಾಮರಾಜಪೇಟೆ ನಿವಾಸಿ ಮಧು (56) ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಮಹಿಳೆಯ ಮನೆ ದೇವರ ಹೆಸರು ಹೇಳಿ ಪರಿಚಯಿಸಿಕೊಂಡಿದ್ದ ಆರೋಪಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಅವರಿಬ್ಬರನ್ನು ಪತ್ತೆ ಹಚ್ಚಲು ಮಂದಿರ ಹಾಗೂ ಅಕ್ಕ–ಪಕ್ಕದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗ ಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಮರ ಪ್ರದಕ್ಷಿಣೆಗೆ ಕಳುಹಿಸಿ ಪರಾರಿ: ‘ಪತಿ ಹಾಗೂ ಮಕ್ಕಳ ಜೊತೆ ವಾಸವಿರುವ ಮಹಿಳೆ, ಇದೇ 27ರಂದು ಬೆಳಿಗ್ಗೆ 9.45ರ ಸುಮಾರಿಗೆ ಚಾಮರಾಜಪೇಟೆಯಲ್ಲಿರುವ ದೇವಸ್ಥಾನಕ್ಕೆ ಹೋಗಿದ್ದರು. ಪೂಜೆ ಮುಗಿಸಿಕೊಂಡು ವಾಪಸ್ ಬರುವಾಗ ದೇವಸ್ಥಾನದ ಆವರಣದಲ್ಲೇ ಅವರನ್ನು ಮಾತನಾಡಿಸಿದ್ದ ಅಪರಿಚಿತನೊಬ್ಬ, ‘ನಾನು ಹರಿದ್ವಾರದಿಂದ ಬಂದಿದ್ದೇನೆ. ನನಗೆ ಗೀತಾ ಮೇಡಂ ಅವರ ವಿಳಾಸ ಬೇಕು’ ಎಂಬುದಾಗಿ ಕೇಳಿದ್ದ’ ಎಂದು ಪೊಲೀಸರು ಹೇಳಿದರು.

‘ನನಗೆ ಗೊತ್ತಿಲ್ಲ’ ಎಂದಿದ್ದ ಮಧು, ಸಮೀಪದಲ್ಲೇ ಇರುವ ಮಳಿಗೆಯೊಂದರ ಬಳಿ ಹೋಗಿ ವಿಚಾರಿಸುವಂತೆ ಹೇಳಿದ್ದರು. ಆಗ ಅಪರಿಚಿತ, ‘ನಿಮ್ಮ ಮನೆ ದೇವರು ಓಷಿಯಾ ಮಾತಾ ಅಲ್ಲವೇ’ ಎಂದು ಪ್ರಶ್ನಿಸಿದ್ದ. ‘ಹೌದು’ ಎಂದು ಮಹಿಳೆ ಹೇಳುತ್ತಿದ್ದಂತೆ, ‘ನಿಮಗೆ ಶುಭದಿನಗಳು ಆರಂಭವಾಗಲಿವೆ. ಚಿನ್ನಾಭರಣವನ್ನು ಪರ್ಸ್‌ನಲ್ಲಿಟ್ಟುಕೊಂಡು ಹೋಗಿ, ಇಂದೇ ಈಶ್ವರ ದೇವಸ್ಥಾನಕ್ಕೆ ಹೋಗಿ ದರುಶನ ಪಡೆದುಕೊಂಡು ಬನ್ನಿ’ ಎಂದಿದ್ದ.’

‘ಆತನ ಮಾತು ನಂಬಿದ್ದ ಮಹಿಳೆ, ಚಿನ್ನಾಭರಣವನ್ನು ಪರ್ಸ್‌ನಲ್ಲಿಟ್ಟುಕೊಂಡು ಸಮೀಪದಲ್ಲೇ ಇದ್ದ ದೇವಸ್ಥಾನಕ್ಕೆ ಹೋಗಿದ್ದರು. ವಾಪಸ್ ಬರುವಾಗ ಮೆಟ್ಟಿಲು ಬಳಿ ಕುಳಿತಿದ್ದ ಅಪರಿಚಿತ, ’ಪರ್ಸ್‌ನಲ್ಲಿರುವ ನಿಮ್ಮ ಆಭರಣಗಳನ್ನು ಹಸುವಿನ ಹಾಲಿನಲ್ಲಿ ತೊಳೆದು ನಿಮ್ಮ ಮನೆ ದೇವರ ಫೋಟೊ ಎದುರು ಇಟ್ಟು ಪೂಜೆ ಮಾಡಿ’ ಎಂದು ಹೇಳಿದ್ದ.’

‘ಅದೇ ಸ್ಥಳದಲ್ಲಿದ್ದಮತ್ತೊಬ್ಬ ಅಪರಿಚಿತ, ಮೈ ಮೇಲೆ ದೇವರು ಬಂದಂತೆ ನಟಿಸಲಾರಂಭಿಸಿದ್ದ. ‘ನಿಮಗೆ ಹನುಮಾನ್ ಕಾಣಿಸುತ್ತಿದ್ದಾನೆ. ಈಗಲೇ ದೇವಸ್ಥಾನದ ಆವರಣದಲ್ಲಿರುವ ಮರದ ಬಳಿ ಹೋಗಿ ಪ್ರದಕ್ಷಿಣೆ ಹಾಕಿ ಬನ್ನಿ’ ಎಂದು ಮಹಿಳೆಗೆ ಹೇಳಿದ್ದ. ಆತನ ಕೈಗೆ ಪರ್ಸ್ ಕೊಟ್ಟಿದ್ದ ಮಹಿಳೆ ಮರ ಸುತ್ತಲು ಹೋಗಿದ್ದರು. ವಾಪಸ್ ಬಂದಾಗ ಅಪರಿಚಿತರಿಬ್ಬರು ಸ್ಥಳದಲ್ಲೇ ಇರಲಿಲ್ಲ. 55 ಗ್ರಾಂ ಚಿನ್ನಾಭರಣ, 6 ಎಸ್ ಐಫೋನ್ ಮೊಬೈಲ್ ಹಾಗೂ ₹ 13,000 ನಗದು ಇದ್ದ ಪರ್ಸ್ ಸಮೇತ ಅವರಿಬ್ಬರು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.