ADVERTISEMENT

ಕೃಷಿ ಆಸಕ್ತರಿಗೆ ಭೂ ಖರೀದಿಗೆ ಅವಕಾಶ: ಜೆ.ಸಿ. ಮಾಧುಸ್ವಾಮಿ

ಭೂ ಸುಧಾರಣೆ ಕಾಯ್ದೆ ಸುಗ್ರೀವಾಜ್ಞೆ: ಸಾಧಕ–ಬಾಧಕ ಸಂವಾದ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 21:05 IST
Last Updated 1 ಆಗಸ್ಟ್ 2020, 21:05 IST
ಜೆ.ಸಿ. ಮಾಧುಸ್ವಾಮಿ
ಜೆ.ಸಿ. ಮಾಧುಸ್ವಾಮಿ   

ಬೆಂಗಳೂರು:‘ಭೂಮಿಯ ಬಳಕೆ ನೀತಿ ಬದಲಾಯಿಸಲು ಅಥವಾ ಭೂಸುಧಾರಣೆಗಾಗಿ ಹಲವು ಕಾಯ್ದೆಗಳು ಬಂದವು. ಆದರೆ, ಯಾವುದೇ ಸುಧಾರಣೆ ಆಗಲಿಲ್ಲ. ಈಗ ತಂದಿರುವ ತಿದ್ದುಪಡಿಯಿಂದ ಕೃಷಿ ಕಾಳಜಿ ಹೊಂದಿರುವವರಿಗೆ, ಆಸಕ್ತರಿಗೆ ಭೂಮಿ ಖರೀದಿಸಲು ಅವಕಾಶ ಸಿಗುತ್ತದೆ. ಕೃಷಿ ಕ್ಷೇತ್ರದ ಅಭಿವೃದ್ಧಿಯೂ ಆಗುತ್ತದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

‘ಕರ್ನಾಟಕ ಭೂಸುಧಾರಣೆ (ತಿದ್ದುಪಡಿ) ಸುಗ್ರೀವಾಜ್ಞೆಯ ಸಾಧಕ–ಬಾಧಕಗಳ ಕುರಿತು ಬೆಂಗಳೂರು ವಿಶ್ವವಿದ್ಯಾಲಯ ಶನಿವಾರ ಏರ್ಪಡಿಸಿದ್ದ ಆನ್‌ಲೈನ್‌ ಸಂವಾದಲ್ಲಿ ಅವರು ಮಾತನಾಡಿದರು. ಇಷ್ಟು ವರ್ಷ ರೈತರಿಗೆ ಭೂಮಿ ಮಾರುವ ಅವಕಾಶವನ್ನೇ ಕೊಟ್ಟಿರಲಿಲ್ಲ. ಈ ತಿದ್ದುಪಡಿಯಿಂದ ಖರೀದಿದಾರರು ಮತ್ತು ರೈತರು ಇಬ್ಬರಿಗೂ ಅವಕಾಶ ಸಿಕ್ಕಂತಾಗುತ್ತದೆ’ ಎಂದರು.

‘ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೃಷಿಭೂಮಿ ಖರೀದಿಗೆ ನಿರ್ಬಂಧವಿರಲಿಲ್ಲ. ಅಲ್ಲಿ ಕೃಷಿ ಅಭಿವೃದ್ಧಿಯಾಗಿಲ್ಲವೇ. ಅಲ್ಲಿಲ್ಲದ ನಿರ್ಬಂಧ ನಮ್ಮಲ್ಲೇಕೆ. ಬೇರೆ ರಾಜ್ಯದವರು ಪಹಣಿ ತೋರಿಸಿ, ನಮ್ಮ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿಸುತ್ತಿರುವಾಗ, ನಮ್ಮ ರಾಜ್ಯದವರಿಗೇ ಕೃಷಿ ಭೂಮಿ ಖರೀದಿಸಲು ಅವಕಾಶ ಕೊಡುವುದರಲ್ಲಿ ತಪ್ಪೇನಿದೆ’ ಎಂದು ಅವರು ಪ್ರಶ್ನಿಸಿದರು.

ADVERTISEMENT

ಶಾಸಕ ಎಚ್.ಕೆ.ಪಾಟೀಲ, ‘1974 ತಿದ್ದುಪಡಿ ನಂತರ, ಎಲ್ಲ ಸರ್ಕಾರಗಳೂ ಭೂಸುಧಾರಣೆ ಕಾಯ್ದೆಯನ್ನು ತಿರುಚಲು ಪ್ರಯತ್ನಿಸಿವೆ. ಈಗಿನ ಸರ್ಕಾರ ಯಶಸ್ವಿಯಾಗಿ ತಿದ್ದುಪಡಿ ತಂದು, ಊರಿನ ಊರುಗೋಲನ್ನು ಕಿತ್ತು, ಉಳ್ಳವರಿಗೆ ಕೊಟ್ಟಿದೆ’ ಎಂದರು.

‘ಬರ, ಪ್ರವಾಹ, ಮಾರುಕಟ್ಟೆ ಶೋಷಣೆಯಂತಹ ತೊಂದರೆಗಳಿಂದ ಜನ ತತ್ತರಿಸಿರುವಾಗ ಸುಗ್ರೀವಾಜ್ಞೆಯ ಅವಶ್ಯಕತೆ ಇತ್ತೇ. ಖರೀದಿ ಮಾಡುವವನಿಗೆ ಅನುಕೂಲ ಮಾಡಿದರೆ ರೈತರ ಹಿತಕಾಯಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಭೂಸುಧಾರಣೆ ಕಾಯ್ದೆಯು ಕಾಗದದ ಹುಲಿಯಂತಿತ್ತು. ಸುಧಾರಣೆ ತರದೇ ಹೋದರೆ ಅಂತಹ ಕಾನೂನುಗಳಿಂದ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

‘ಈ ಸುಗ್ರೀವಾಜ್ಞೆಯಿಂದ ರೈತರ ಹಿತಕ್ಕೆ ಧಕ್ಕೆಯಾಗಿದೆ ಎಂದು ಒಪ್ಪಲಾಗದು. ಈಗಾಗಲೇ ರೈತರ ಪರಿಸ್ಥಿತಿ ಹಾಳಾಗಿದೆ. ಕೃಷಿಭೂಮಿ ಮಾರಬೇಕೋ, ಬೇಡವೋ ಎಂಬುದನ್ನು ರೈತನೇ ನಿರ್ಧರಿಸಲು ಈ ತಿದ್ದುಪರಿ ಅವಕಾಶ ಕಲ್ಪಿಸಲಿದೆ’ ಎಂದರು.

‘ಸುಗ್ರೀವಾಜ್ಞೆ ತಂದರೂ ಶಾಸನಸಭೆಯಲ್ಲಿ ಇದನ್ನು ಮಂಡಿಸಲೇ ಬೇಕಾಗುತ್ತದೆ. ಸುಗ್ರೀವಾಜ್ಞೆ ತರುವಂತಹ ತುರ್ತು ಇರಲಿಲ್ಲ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಿದರೂ ಅದಕ್ಕೆ ಮಾನ್ಯತೆ ಸಿಗುವ ಸಾಧ್ಯತೆ ಇಲ್ಲ’ ಎಂದೂ ಅವರು ತಿಳಿಸಿದರು.

ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ ಅಧ್ಯಕ್ಷತೆ ವಹಿಸಿದ್ದರು. ರೈತನಾಯಕಿ ಸುನಂದಾ ಜಯರಾಮ್‌ ಮಾತನಾಡಿದರು.

ಮೊಕದ್ದಮೆಗಳ ಮುಚ್ಚಿ ಹಾಕುವ ಯತ್ನ

‘ಒಂದು ತಿದ್ದುಪಡಿಯಿಂದ ಸುಮಾರು 13,894 ಭೂಸುಧಾರಣಾ ಮೊಕದ್ದಮೆಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಕೋ-ಆಪರೇಟಿವ್ ಸೊಸೈಟಿಗಳು ಹಿಂದಿನ ಕಾಯ್ದೆಗಳನ್ನು ಉಲ್ಲಂಘಿಸಿ, ಬೆಂಗಳೂರು ಸುತ್ತ–ಮುತ್ತ ಸಾವಿರಾರು ಎಕರೆ ಪ್ರದೇಶಗಳನ್ನು ಖರೀದಿಸಿವೆ. ಅವುಗಳಿಗೆ ಕಾನೂನು ಮಾನ್ಯತೆ ನೀಡಿ ರಕ್ಷಿಸುವ ಪ್ರಯತ್ನವಿದು’ ಎಂದು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.