ADVERTISEMENT

ಬೆಂಗಳೂರು | ಪ್ರತ್ಯೇಕ ಅಪಘಾತ: ಎಂಜಿನಿಯರಿಂಗ್‌ ವಿದ್ಯಾರ್ಥಿ ಸೇರಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 15:25 IST
Last Updated 17 ಜುಲೈ 2024, 15:25 IST
<div class="paragraphs"><p>ಅಪಘಾತ</p></div>

ಅಪಘಾತ

   

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ನಗರದಲ್ಲಿ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಸೇರಿ ಇಬ್ಬರು ಮೃತಪಟ್ಟಿದ್ದು, ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾರೆ. 

ADVERTISEMENT

ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಅತಿವೇಗವಾಗಿ ಬಂದ ಬೈಕ್‌ವೊಂದು ರಸ್ತೆ ದಾಟುತ್ತಿದ್ದ ಎಂಜಿನಿಯರ್ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕಲಬುರಗಿಯ ಕಿರಣ್(19) ಮೃತಪಟ್ಟಿದ್ದಾರೆ. ಚೇತನ್(19) ಗಾಯಗೊಂಡಿದ್ಧಾರೆ. 

ಎಂವಿಐಟಿ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಕೃತ್ಯ ಎಸಗಿದ ಬೈಕ್‌ ಸವಾರ ವಿಜಯ್(25) ಎಂಬಾತನನ್ನು ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಯಲಹಂಕದ ಎಂವಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಇ ವ್ಯಾಸಂಗ ಮಾಡುತ್ತಿರುವ ಕಿರಣ್, ಕಾಲೇಜು ಸಮೀಪದ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು.

ಮಂಗಳವಾರ ರಾತ್ರಿ ತನ್ನ ಐವರು ಸ್ನೇಹಿತರ ಜತೆ ಹಾಸ್ಟೆಲ್ ಸಮೀಪದ ಬರ್ಗರ್ ಸೆಂಟರ್‌ಗೆ ಹೋಗಿ ವಾಪಸ್ಸಾಗುತ್ತಿದ್ದರು. ಈ ವೇಳೆ ರಸ್ತೆ ವಿಭಜಕ ದಾಟುವಾಗ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆ ಕಡೆಯಿಂದ ನಗರದ ಕಡೆಗೆ ವೇಗವಾಗಿ ಬಂದ ಬೈಕ್‌ ಏಕಾಏಕಿ ಕಿರಣ್ ಹಾಗೂ ಚೇತನ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಿರಣ್ ಮತ್ತು ಚೇತನ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಕೂಡಲೇ ಸ್ನೇಹಿತರು ಸ್ಥಳೀಯರ ನೆರವಿನಿಂದ ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಕಿರಣ್ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ಧಾರೆ. ಚೇತನ್ ಕಾಲಿಗೆ ಗಂಭೀರ ಪೆಟ್ಟುಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಬೈಕ್‌ ಸವಾರ ಸಾವು:

ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ವೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಡ್ಲು ನಿವಾಸಿ ಶಶಿಕುಮಾರ್(35) ಮೃತಪಟ್ಟವರು.

ಮಂಗಳವಾರ ರಾತ್ರಿ 10.30ಕ್ಕೆ ಸಿಂಗಸಂದ್ರದ ಸಿಲ್ವರ್ ಕೌಂಟಿ ರಸ್ತೆಯ ಬಿರ್ಲಾ ಜಂಕ್ಷನ್ ಬಳಿ ಈ ದುರ್ಘಟನೆ ನಡೆದಿದೆ.

ಎಚ್‌ಎಸ್‌ಆರ್ ಲೇಔಟ್‌ನ ಟ್ರಾವೆಲ್ಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬೈಕ್‌ ಸವಾರ, ಕೆಲಸ ಮುಗಿಸಿಕೊಂಡು ಸಿಂಗಸಂದ್ರದ ಕಡೆಗೆ ಬಂದಿದ್ದರು. ಅಲ್ಲಿಂದ ಮನೆಗೆ ವಾಪಸ್‌ ಆಗುತ್ತಿದ್ದ ವೇಳೆ ಬಿರ್ಲಾ ಜಂಕ್ಷನ್ ಈ ಅಪಘಾತ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.