ADVERTISEMENT

11 ರಸ್ತೆಗಳಲ್ಲಿ ಬಿಎಂಟಿಸಿಗೆ ಪ್ರತ್ಯೇಕ ಮಾರ್ಗ: 202 ಕಿ.ಮೀ ಆದ್ಯತಾ ಪಥ

ಬಸ್ ಬಳಸಿ

ಪ್ರವೀಣ ಕುಮಾರ್ ಪಿ.ವಿ.
Published 26 ಡಿಸೆಂಬರ್ 2019, 6:33 IST
Last Updated 26 ಡಿಸೆಂಬರ್ 2019, 6:33 IST
   

ಬೆಂಗಳೂರು: ಕಳೆದ ದಶಕಕ್ಕೆ ಹೋಲಿಸಿದರೆ ನಗರದಲ್ಲಿ ಪ್ರಯಾಣಕ್ಕೆ ತಗಲುವ ಸಮಯ ಗಣನೀಯವಾಗಿ ಹೆಚ್ಚಳವಾಗಿದೆ. ಬಸ್‌ಗಳ ಸರಾಸರಿ ವೇಗವನ್ನು ಹೆಚ್ಚಿಸುವ ಸಲುವಾಗಿ ನಗರದ 11 ಪ್ರಮುಖ ಕಾರಿಡಾರ್‌ಗಳಲ್ಲಿ ಬಸ್‌ ಆದ್ಯತಾ ಪಥವನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಒಟ್ಟು 202 ಕಿ.ಮೀ ಉದ್ದದ ರಸ್ತೆಯನ್ನು ಗುರುತಿಸಲಾಗಿದೆ.

ಯಾವೆಲ್ಲ ರಸ್ತೆಗಳಲ್ಲಿ ಬಸ್‌ ಆದ್ಯತಾ ಪಥಗಳನ್ನು ಆರಂಭಿಸಲಾಗುತ್ತದೆ ಎಂಬುದನ್ನು ಸಮಗ್ರ ಸಂಚಾರ ಯೋಜನೆಯ (ಸಿಎಂಪಿ) ಕರಡಿನಲ್ಲಿ ವಿವರಿಸಲಾಗಿದೆ.

ನಗರದಲ್ಲಿ ವಾಹನಗಳ ಹೆಚ್ಚಳದಿಂದ ರಸ್ತೆಗಳ ಮೇಲಿನ ಹೊರೆ ಅನೇಕ ಪಟ್ಟು ಹೆಚ್ಚಿದೆ. ರಸ್ತೆ ಸಂಪರ್ಕ ಜಾಲದಲ್ಲಿ ಸಮಂಜಸವಾದ ಸ್ತರ ವ್ಯವಸ್ಥೆ ಇಲ್ಲದ ಕಾರಣ ಸಂಚಾರ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. 2008ರಲ್ಲಿ ನಗರದಲ್ಲಿ ವಾಹನ ಸಂಚಾರದ ಸರಾಸರಿ ವೇಗ ಗಂಟೆಗೆ 18 ಕಿ.ಮೀ.ಗಳಷ್ಟಿತ್ತು. 2015ರಲ್ಲಿ ಅದು ಗಂಟೆಗೆ 11 ಕಿ.ಮೀ.ಗೆ ಕುಸಿದಿದೆ. 2031ರ ವೇಳೆಗೆ ಇದು 8 ಕಿ.ಮೀ.ಗೆ ಕುಸಿಯಲಿದೆ ಎಂದು ಬೆಂಗಳೂರು ನಗರದ ಪರಿಷ್ಕೃತ ನಗರ ಮಹಾಯೋಜನೆ 2031ರ ಕರಡಿನಲ್ಲಿ ಅಂದಾಜಿಸಲಾಗಿತ್ತು.

ADVERTISEMENT
ಬಸ್ ಆದ್ಯತಾ ಪಥಕ್ಕೆ ಗುರುತಿಸಿರುವ ರಸ್ತೆಗಳು

ಹೆಚ್ಚುತ್ತಿರುವ ವಾಹನ ದಟ್ಟಣೆ ಸಾರ್ವಜನಿಕ ಬಸ್‌ಗಳ ನಿರ್ವಹಣೆ ಮೇಲೂ ಪರಿಣಾಮ ಬೀರುತ್ತಿದೆ. ಖಾಸಗಿ ವಾಹನ ಬಳಕೆ ಹೆಚ್ಚುತ್ತಿದ್ದು, ಸಾರ್ವಜನಿಕ ಸಾರಿಗೆಯ ಪ್ರಮಾಣ ದಿನೇದಿನೇ ಕುಸಿಯುತ್ತಿದೆ. ಪ್ರಸ್ತುತ ವಾಹನಗಳ ಒಟ್ಟು ಟ್ರಿಪ್‌ಗಳ ಪೈಕಿ ಶೇಕಡಾ 52ರಷ್ಟು ಪಾಲು ಖಾಸಗಿ ವಾಹನಗಳದ್ದು.

ಸಿಎಂಪಿ ಪ್ರಕಾರ ನಗರದಲ್ಲಿ ಬಸ್‌ಗಳ ವೇಗ ಗಂಟೆಗೆ 10 ಕಿ.ಮೀ.ನಿಂದ 15 ಕಿ.ಮೀ.ಗಳಷ್ಟಿದೆ. ಇದನ್ನು ಗಂಟೆಗೆ 20 ಕಿ.ಮೀಯಿಂದ 25ಕಿ.ಮೀಗೆ ಹೆಚ್ಚಿಸುವ ಉದ್ದೇಶ ಸರ್ಕಾರದ್ದು. ಈ ಸಲುವಾಗಿ ಅತಿ ಹೆಚ್ಚು ದಟ್ಟಣೆಯ ಒತ್ತಡ ಎದುರಿಸುತ್ತಿರುವ 11 ಕಾರಿಡಾರ್‌ಗಳಲ್ಲಿ ಬಿಎಂಟಿಸಿ ಬಸ್‌ಗಳಿಗೆ ಆದ್ಯತಾ ಪಥವನ್ನು ನಿರ್ಮಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಈ ವರ್ಷ ಸಿಲ್ಕ್‌ಬೋರ್ಡ್‌ನಿಂದ ಟಿನ್‌ಫ್ಯಾಕ್ಟರಿವರೆಗೆ ಹೊರವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳಿಗೆ ಪ್ರಾಯೋಗಿಕವಾಗಿ ಆದ್ಯತಾ ಪಥವನ್ನು ಆರಂಭಿಸಿದೆ. ಆ ಬಳಿಕ ಈ ರಸ್ತೆಯಲ್ಲಿ ದಟ್ಟಣೆ ಅವಧಿಯಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ಗಳ ಸಂಚಾರದ ಸರಾಸರಿ ವೇಗ ಹೆಚ್ಚಳವಾಗಿದೆ. ಬೆಳಿಗ್ಗೆ ಮತ್ತು ಸಂಜೆ ದಟ್ಟಣೆ ಅವಧಿಯಲ್ಲಿ ಸಿಲ್ಕ್‌ ಬೋರ್ಡ್‌ನಿಂದ ಟಿನ್‌ ಫ್ಯಾಕ್ಟರಿ ತಲುಪಲು ಈ ಹಿಂದೆ ಸರಾಸರಿ 1 ಗಂಟೆ 30 ನಿಮಿಷ ತಗಲುತ್ತಿತ್ತು. ಈಗ ಅದು 1 ಗಂಟೆ 14 ನಿಮಿಷಗಳಿಗೆ ಇಳಿದಿದೆ. ದಟ್ಟಣೆ ಅವಧಿಯಲ್ಲಿ ಸರಾಸರಿ 16 ನಿಮಿಷ ಹಾಗೂ ದಟ್ಟಣೆ ಇಲ್ಲದ ಅವಧಿಯಲ್ಲಿ ಸರಾಸರಿ 8 ನಿಮಿಷ ಉಳಿತಾಯವಾಗುತ್ತಿದೆ.

ಕನಿಷ್ಠ 24 ಮೀ ಅಗಲ ಇರುವ ರಸ್ತೆಗಳಲ್ಲಿ ಸಾರ್ವಜನಿಕ ಸಾರಿಗೆ ಬಸ್‌ಗಳಿಗೆ ಪ್ರತ್ಯೇಕ ಪಥಗಳನ್ನು ಗೊತ್ತುಪಡಿಸಬೇಕು. ಆದ್ಯತಾ ಪಥದಲ್ಲಿ ಚಲಿಸುವ ಖಾಸಗಿ ವಾಹನಗಳ ಮೇಲೆ ನಿಗಾ ಇಡಲು ಕ್ಯಾಮೆರಾ ಆಧರಿತ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಸಿಎಂಪಿಯಲ್ಲಿ ಹೇಳಲಾಗಿದೆ.

ಮೆಟ್ರೊ ಶುರುವಾದ ಬಳಿಕ ಆದ್ಯತಾ ಪಥ ಬೇಡ

ಬಸ್‌ ಆದ್ಯತಾ ಪಥಗಳನ್ನು ರೂಪಿಸಲು ಗುರುತಿಸಿರುವ ಕೆಲವು ರಸ್ತೆಗಳ ಪಕ್ಕದಲ್ಲಿ ‘ನಮ್ಮಮೆಟ್ರೊ’ ಮಾರ್ಗ ನಿರ್ಮಾಣವಾಗಲಿದೆ. ಇಲ್ಲಿ ಮೆಟ್ರೊ ಸೇವೆ ಆರಂಭವಾದ ಬಳಿಕ ಬಸ್‌ ಆದ್ಯತಾ ಪಥಗಳನ್ನು ರದ್ದುಪಡಿಸಬಹುದು ಎಂದು ಸಿಎಂಪಿಯಲ್ಲಿ ಶಿಫಾರಸು ಮಾಡಲಾಗಿದೆ.

ಸಿಲ್ಕ್‌ಬೋರ್ಡ್‌ನಿಂದ ಹೆಬ್ಬಾಳವರೆಗಿನ ಹೊರವರ್ತುಲ ರಸ್ತೆ, ನಾಯಂಡಹಳ್ಳಿಯಿಂದ ಜೆ.ಡಿ.ಮರ ಜಂಕ್ಷನ್‌ವರೆಗಿನ ಹೊರವರ್ತುಲ ರಸ್ತೆ, ಸರ್ಜಾಪುರ ರಸ್ತೆಗಳಲ್ಲಿ ಮೆಟ್ರೊ ಮಾರ್ಗ ನಿರ್ಮಾಣವಾಗಲಿದೆ. ಇಲ್ಲಿ ಕ್ರಮೇಣ ಬಸ್‌ ಆದ್ಯತಾ ಪಥಗಳನ್ನು ಕೈಬಿಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.