ಬೆಂಗಳೂರು: ನೈಸ್ ರಸ್ತೆಯ ಟೋಲ್ ಗೇಟ್ ಬಳಿ ಸೋಮವಾರ ಬೆಳಿಗ್ಗೆ ಮಿನಿ ಬಸ್, ಲಾರಿ ಮತ್ತು ಎರಡು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಒಬ್ಬ ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸ್ವಿಚ್ ಬೋರ್ಡ್ ಕಂಪನಿ ಉದ್ಯೋಗಿ ಕುಣಿಗಲ್‌ನ ದೇವರಾಜು (42) ಮೃತಪಟ್ಟಿದ್ದಾರೆ. ಬಸ್‌ನಲ್ಲಿದ್ದ ನಾಲ್ವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಹೊಸೂರು ರಸ್ತೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಕಾರುಗಳಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬಸಾಪುರ ಸೇತುವೆ ಬಳಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಬೊಮ್ಮಸಂದ್ರದ ಸ್ವಿಚ್ ಬೋರ್ಡ್ ಕಂಪನಿಯ ಉದ್ಯೋಗಿಗಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಕೆಲವೇ ಸೆಕೆಂಡುಗಳಲ್ಲಿ ಮಿನಿ ಬಸ್‌ಗೆ ಎರಡು ಕಾರುಗಳು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿವೆ.
ಅಪಘಾತದಿಂದಾಗಿ ಕೆಲಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನ ಸವಾರರು ಪರದಾಡಿದರು. ಬಳಿಕ ಪೊಲೀಸರು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
‘ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಲಾರಿಯನ್ನು ಜನನಿಬಿಡ ರಸ್ತೆಯಲ್ಲಿ ನಿಲ್ಲಿಸಿ ಹೋಗಿರುವುದು ಚಾಲಕನ ನಿರ್ಲಕ್ಷ್ಯವಾಗಿದೆ. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಮಿನಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಸಂಚಾರ ಪೊಲೀಸರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.