ADVERTISEMENT

ಆಹಾರ ಕಲಬೆರಕೆಗೆ ಕಠಿಣ ಶಿಕ್ಷೆ: ಶ್ರೀರಾಮುಲು

ವಿಧಾನ ಪರಿಷತ್‌ನಲ್ಲಿ ‘ಪ್ರಜಾವಾಣಿ’ ವರದಿ ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 20:07 IST
Last Updated 19 ಮಾರ್ಚ್ 2020, 20:07 IST
ಶ್ರೀರಾಮುಲು
ಶ್ರೀರಾಮುಲು   

ಬೆಂಗಳೂರು: ‘ಆಹಾರ ಕಲಬೆರಕೆ ಪರೀಕ್ಷೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು, ಸಿಬ್ಬಂದಿ ಕೊರತೆ ನಿವಾರಿಸಲಾಗುವುದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ, ಗುರಿ ನೀಡಿ ಪ್ರಕರಣ ದಾಖಲಿಸುವ ಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ವಿರೋಧ ಪಕ್ಷದ ನಾಯಕ ಎಸ್‌.ಆರ್.ಪಾಟೀಲ ಅವರು ಮಂಡಿಸಿದ ಆಹಾರ ಕಲಬೆರಕೆ ಕುರಿತು ಗಮನ ಸೆಳೆಯುವ ಸೂಚನೆ ಮೇಲಿನ ಸುದೀರ್ಘ ಚರ್ಚೆಯ ಬಳಿಕ ಅವರು ಈ ಉತ್ತರ ನೀಡಿದರು.

‘ಆಹಾರ ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ಇಲ್ಲದೆ ನಿಷ್ಕ್ರಿಯವಾಗಿರುವುದು ಗಂಭೀರ ಲೋಪ, ಇದನ್ನು ತಕ್ಷಣ ಪರಿಹರಿಸಲಾಗುವುದು’ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ADVERTISEMENT

ಎಸ್‌.ಆರ್‌.ಪಾಟೀಲ ಅವರು ‘ಪ್ರಜಾವಾಣಿ’ಯಲ್ಲಿ ಇದೇ 15ರಂದು ಪ್ರಕಟವಾದ ‘ಖಾದ್ಯ ತೈಲದಲ್ಲೂ ವಿಷ’ ಸುದ್ದಿಯನ್ನು ಉಲ್ಲೇಖಿಸಿ, ಇಡೀ ರಾಜ್ಯದಲ್ಲಿ ನಾವು ಸೇವಿಸುವ ಎಣ್ಣೆ, ಆಹಾರ, ಹಾಲು, ಹಣ್ಣು ಕಲಬೆರೆಕೆಯಾಗಿ, ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತಿದೆ, ಮಾದಕ ವಸ್ತು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳುವ ರೀತಿಯಲ್ಲಿ ಕಲಬೆರಕೆ ದಂಧೆಯಲ್ಲಿ ತೊಡಗಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆ.ಟಿ.ಶ್ರೀಕಂಠೇಗೌಡ, ಆರ್‌.ಬಿ.ತಿಮ್ಮಾಪೂರ, ಎಂ.ನಾರಾಯಣಸ್ವಾಮಿ, ಪಿ.ಆರ್‌.ರಮೇಶ್‌ ಅವರೂ ‘ಪ್ರಜಾವಾಣಿ’ ವರದಿ ಪ್ರಸ್ತಾಪಿಸಿದರು. ನಾರಾಯಣಸ್ವಾಮಿ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಕಲಬೆರಕೆ ಹಾಲಿನ ದಂಧೆಯ ಕುರಿತೂ ಬೆಳಕು ಚೆಲ್ಲಿದರು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಾವಯವ ಬೆಲ್ಲದ ಹೆಸರಲ್ಲಿ ರಾಸಾಯನಿಕ ಬೆರೆಸಿದ ಬೆಲ್ಲ ಮಾರಾಟ ಮಾಡುತ್ತಿರುವುದನ್ನು ತಿಳಿಸಿದರೆ, ಎಸ್‌.ವಿ.ಸಂಕನೂರ ಅವರು ಚಹಾ ಪುಡಿಗೆ ಮರದ ಪುಡಿ ಸೇರಿಸುವ ದಂಧೆಯ ಬಗ್ಗೆ ಮಾಹಿತಿ ನೀಡಿದರು.

ಸುಮಾರು ಒಂದು ಗಂಟೆ ಕಾಲ ನಡೆದ ಚರ್ಚೆಯಲ್ಲಿ ಎಲ್ಲ ಸದಸ್ಯರು ಬಹಳ ಗಂಭೀರವಾಗಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.