ADVERTISEMENT

ರಾಗಿ ಖರೀದಿಗೆ ಸರ್ವರ್‌ ಸಮಸ್ಯೆ

ಹೆಸರು ನೋಂದಣಿ ತಾತ್ಕಾಲಿಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 18:57 IST
Last Updated 25 ಏಪ್ರಿಲ್ 2022, 18:57 IST
ತಿಪಟೂರು ರಾಗಿ ಖರೀದಿ ಕೇಂದ್ರ ಎದುರು ಸರದಿ ಸಾಲಿನಲ್ಲಿ ಕಲ್ಲು, ಚಪ್ಪಲಿ, ಬ್ಯಾಗ್ ಇಟ್ಟು ಕಾದು ಕುಳಿತಿದ್ದ ರೈತರು.
ತಿಪಟೂರು ರಾಗಿ ಖರೀದಿ ಕೇಂದ್ರ ಎದುರು ಸರದಿ ಸಾಲಿನಲ್ಲಿ ಕಲ್ಲು, ಚಪ್ಪಲಿ, ಬ್ಯಾಗ್ ಇಟ್ಟು ಕಾದು ಕುಳಿತಿದ್ದ ರೈತರು.   

ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಸೋಮವಾರದಿಂದ ಆರಂಭವಾಗಬೇಕಿದ್ದ ರೈತರ ಹೆಸರು ನೋಂದಣಿ ಪ್ರಕ್ರಿಯೆ ತಾಂತ್ರಿಕ ಸಮಸ್ಯೆಗಳಿಂದಾಗಿ ಸಾಧ್ಯವಾಗಲಿಲ್ಲ.ತಾಂತ್ರಿಕ ಸಮಸ್ಯೆ ಪರಿಹಾರವಾಗುವವರೆಗೂ ಹೆಸರು ನೋಂದಣಿ ಪ್ರಕ್ರಿಯೆಯನ್ನುತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ರೈತರಿಗೆ ಟೋಕನ್‌ ನೀಡಿ ಕಳಿಸಲಾಗಿದೆ.

ಭಾನುವಾರ ರಾತ್ರಿಯಿಂದಲೇ ಖರೀದಿ ಕೇಂದ್ರದ ಬಳಿ ಸರದಿಯಲ್ಲಿ ಕಾಯುತ್ತಿದ್ದ ನೂರಾರು ರೈತರು ನಿರಾಸೆಯಿಂದ ಮರಳಿದ್ದಾರೆ.

ತಿಪಟೂರು ಮತ್ತು ದೊಡ್ಡಬಳ್ಳಾಪುರ ಖರೀದಿ ಕೇಂದ್ರಗಳಲ್ಲಿ ನೂರಾರು ಸಂಖ್ಯೆಯ ರೈತರು ಮುಗಿಬಿದ್ದರು. ಅವರನ್ನು ಚದುರಿಸಲು ಪೊಲೀಸರು ಪರದಾಡಬೇಕಾಯಿತು. ಸೋಮವಾರ ಮಧ್ಯಾಹ್ನದವರೆಗೂ ಸರ್ವರ್‌ ಸಮಸ್ಯೆ ಬಗೆಹರಿಯದ ಕಾರಣ ಬೇಸತ್ತ ರೈತರು ಕುಣಿಗಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಡ್ಡಲಾಗಿಕಲ್ಲುಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು. ಇದರಿಂದ ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಕೆಲಹೊತ್ತು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ADVERTISEMENT

ಸ್ಥಳಕ್ಕೆ ಬಂದ ಶಾಸಕ ಮತ್ತು ಅಧಿಕಾರಿಗಳು ಸಮಾಧಾನಗೊಳಿಸಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು. ರಾಜ್ಯದಾದ್ಯಂತ ಸರ್ವರ್‌ ಸಮಸ್ಯೆ ಕಾಣಿಸಿಕೊಂಡಿದ್ದು, ಅದು ಸರಿಯಾಗಲು ಇನ್ನೂ ಎರಡು ದಿನ ಬೇಕಾಗಬಹುದು. ಅಲ್ಲಿಯವರೆಗೆ ಹೆಸರು ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ರೈತರಿಗೆ ಟೋಕನ್‌ ಕೊಟ್ಟು ಕಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಿಪಟೂರಿನಲ್ಲಿ ತಡರಾತ್ರಿಯೇ ದಾಖಲೆ ಸಮೇತ ಬಂದಿದ್ದ ರೈತರು ಸರದಿ ಸಾಲಿನಲ್ಲಿ ಕಲ್ಲು, ಚಪ್ಪಲಿ, ಹಳೆಯ ಗೋಣಿ ಚೀಲ,ಪ್ಲಾಸ್ಟಿಕ್‌ ಚೀಲ, ಪೊರಕೆ, ರಟ್ಟಿನ ಡಬ್ಬಿ, ಖಾಲಿ ಪ್ಲಾಸ್ಟಿಕ್‌ ಬಾಟಲ್‌ ಜೊತೆ ಮದ್ಯದ ಖಾಲಿ ಬಾಟಲಿಗಳನ್ನು ಇಟ್ಟು ಕಾದು ಕುಳಿತಿದ್ದರು.

ರಾಗಿ ಹೆಚ್ಚಾಗಿ ಬೆಳೆಯುವ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರಜಿಲ್ಲೆಗಳಲ್ಲೂ ಇದೇ ಸಮಸ್ಯೆ ಕಾಣಿಸಿ
ಕೊಂಡಿದ್ದು, ರೈತರಿಂದ ಅರ್ಜಿ ಪಡೆದು, ಟೋಕನ್‌ ಕೊಟ್ಟು ಕಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.