ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 70ರಷ್ಟು ಹಾಸಿಗೆ ಖಾಲಿ

ಕೋವಿಡ್‌ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 20:12 IST
Last Updated 19 ಡಿಸೆಂಬರ್ 2020, 20:12 IST
ಬೆಂಗಳೂರಿನ ಸೇಂಟ್‌ ಜಾನ್‌ ಆಸ್ಪತ್ರೆ
ಬೆಂಗಳೂರಿನ ಸೇಂಟ್‌ ಜಾನ್‌ ಆಸ್ಪತ್ರೆ    
""
""

ಬೆಂಗಳೂರು: ಕೋವಿಡ್‌ ಪೀಡಿತರನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುವುದನ್ನು ಸ್ಥಗಿತಗೊಳಿಸಿದ ಬಳಿಕವೂ ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 70ರಷ್ಟು ಹಾಸಿಗೆಗಳು ಖಾಲಿಯಿವೆ. ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ.

ನಗರದಲ್ಲಿ ಜುಲೈ ಮೊದಲ ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯತ್ತ ಮುಖಮಾಡಿದ್ದರಿಂದ ಕೋವಿಡ್‌ ಚಿಕಿತ್ಸೆಗೆ ಗುರುತಿಸಲಾದ ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಬಹುತೇಕ ಹಾಸಿಗೆಗಳು ಭರ್ತಿಯಾಗಿದ್ದವು. ಹಜ್ ಭವನ, ಶ್ರೀ ಶ್ರೀ ರವಿಶಂಕರ ಗುರೂಜಿ ಆಶ್ರಮ, ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ) ಸೇರಿದಂತೆ ನಗರದ ವಿವಿಧೆಡೆ ಕೋವಿಡ್ ಆರೈಕೆ ಕೇಂದ್ರಗಳನ್ನುಪ್ರಾರಂಭಿಸಲಾಗಿತ್ತು.

ಇಷ್ಟಾಗಿಯೂ ಹಾಸಿಗೆಗಳ ಸಮಸ್ಯೆ ನಿವಾರಣೆಯಾಗದ ಪರಿಣಾಮ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿಪಡಿಸಿ, ಚಿಕಿತ್ಸೆಗೆ ಅವಕಾಶ ನೀಡಲಾಗಿತ್ತು.

ADVERTISEMENT

73 ಖಾಸಗಿ ಆಸ್ಪತ್ರೆಗಳಲ್ಲಿ ಶೇ 50 ರಷ್ಟು ಹಾಸಿಗೆಗಳನ್ನು ಸರ್ಕಾರವು ಶಿಫಾರಸು ಮಾಡುವ ರೋಗಿಗಳಿಗೆ ಮೀಸಲಿಡಬೇಕಿತ್ತು. 5 ಸಾವಿರಕ್ಕೂ ಅಧಿಕ ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆ ಗಳಲ್ಲಿ ಗುರುತಿಸಲಾಗಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡ ಕಾರಣ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುವ ನಿಯಮವನ್ನು ಕೈಬಿಡಲಾಗಿದೆ.

ಸೋಂಕಿತರಲ್ಲಿ ಬಹುತೇಕರು ಮನೆ ಆರೈಕೆಗೆ ಒಳಪಡುತ್ತಿರುವ ಕಾರಣ ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯ ಕೀಯ ಕಾಲೇಜುಗಳಲ್ಲಿ ಕೂಡ ಸದ್ಯ 558 ಮಂದಿ ಮಾತ್ರ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ. ಅಲ್ಲಿ 1,071 ಹಾಸಿಗೆ ಗಳು ಖಾಲಿಯಿವೆ. ಸದ್ಯ ನಗರದಲ್ಲಿ 10 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.

ಕೋವಿಡೇತರ ಚಿಕಿತ್ಸೆಗೆ ಬಳಕೆ: ‘ಬಹುತೇಕ ಕೋವಿಡ್ ರೋಗಿಗಳಿಗೆ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸುತ್ತಿಲ್ಲ. ಅಂತಹವರು ಹೆಚ್ಚಾಗಿ ಮನೆಯಲ್ಲಿಯೆ ಆರೈಕೆ ಮಾಡಿ ಕೊಳ್ಳುತ್ತಿದ್ದಾರೆ. ಹೀಗಾಗಿಯೇ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಶಿಫಾರಸು ಮಾಡುವ ನಿಯಮವನ್ನು ಸದ್ಯಕ್ಕೆ ಕೈಬಿಡಲಾಗಿದೆ. ಇದೇ ರೀತಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಇಳಿಕೆ ಕಂಡಲ್ಲಿ ಮುಂದಿನ ದಿನಗಳಲ್ಲಿ ಮೀಸಲಿರಿಸಿದ ಹಾಸಿಗೆಗಳನ್ನು ಕೋವಿಡೇತರ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿ ಯೊಬ್ಬರು ತಿಳಿಸಿದರು.

ಕೋವಿಡ್: 12 ಸಾವಿರ ದಾಟಿದ ಸಾವು
ಕೋವಿಡ್ ಪೀಡಿತರಲ್ಲಿ ಮತ್ತೆ 15 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇದರಿಂದಾಗಿ ಕೋವಿಡ್‌ನಿಂದ ಈವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 12 ಸಾವಿರ ದಾಟಿದೆ.

ರಾಜ್ಯದಲ್ಲಿ ಶನಿವಾರ 1,152 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.08 ಲಕ್ಷ ದಾಟಿದೆ. ಈ ತಿಂಗಳು 19 ದಿನಗಳಲ್ಲಿ 23,379 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 1,230 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಒಂದೇ ದಿನ 1 ಲಕ್ಷ ಆರ್‌ಟಿ–ಪಿಸಿಆರ್ ಸೇರಿದಂತೆ 1.15 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ 1.29 ಕೋಟಿ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ.

ಕೋವಿಡ್ ಪೀಡಿತರಲ್ಲಿ 2,147 ಮಂದಿಗೆ ಕಾಯಿಲೆ ವಾಸಿಯಾಗಿದ್ದು, ಇದರಿಂದಾಗಿ ಚೇತರಿಸಿಕೊಂಡವರ ಸಂಖ್ಯೆ 8.81 ಲಕ್ಷಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು ಮತ್ತಷ್ಟು ಇಳಿಕೆ ಕಂಡಿದ್ದು, ಸದ್ಯ 14,370 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 223 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಕಳೆದ 14 ದಿನಗಳ ಅವಧಿಯಲ್ಲಿ 80 ಸಾವಿರ ನೇರ ಸಂಪರ್ಕಿತರು ಹಾಗೂ 90 ಸಾವಿರ ಪರೋಕ್ಷ ಸಂಪರ್ಕಿತರನ್ನು ಗುರುತಿಸಲಾಗಿದೆ.

ಬೆಂಗಳೂರಿನಲ್ಲಿ 586 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.82 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 66 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ 51,732ಕ್ಕೆ ತಲುಪಿದೆ.

ಕಲಬುರ್ಗಿಯಲ್ಲಿ 50, ದಕ್ಷಿಣ ಕನ್ನಡದಲ್ಲಿ 34, ಬೆಂಗಳೂರು ಗ್ರಾಮಾಂತರದಲ್ಲಿ 31, ಶಿವಮೊಗ್ಗದಲ್ಲಿ 30, ಮಂಡ್ಯದಲ್ಲಿ 30, ಬೆಳಗಾವಿಯಲ್ಲಿ 29 ಪ್ರಕರಣಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.