ADVERTISEMENT

ಒಳಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 19:31 IST
Last Updated 7 ಡಿಸೆಂಬರ್ 2018, 19:31 IST
ಒಳಚರಂಡಿ ಕಾಮಗಾರಿಗೆ ಶಾಸಕ ಎಸ್.ಟಿ.ಸೋಮಶೇಖರ್ ಗುದ್ದಲಿ ಪೂಜೆ ನೆರವೇರಿಸಿದರು. ಪಾಲಿಕೆ ಸದಸ್ಯ ವಾಸುದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್, ಪಕ್ಷದ ಮುಖಂಡರಾದ ಸತೀಶ್, ಕುರಲಪ್ಪ ಇದ್ದರು
ಒಳಚರಂಡಿ ಕಾಮಗಾರಿಗೆ ಶಾಸಕ ಎಸ್.ಟಿ.ಸೋಮಶೇಖರ್ ಗುದ್ದಲಿ ಪೂಜೆ ನೆರವೇರಿಸಿದರು. ಪಾಲಿಕೆ ಸದಸ್ಯ ವಾಸುದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್, ಪಕ್ಷದ ಮುಖಂಡರಾದ ಸತೀಶ್, ಕುರಲಪ್ಪ ಇದ್ದರು   

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಬಿದರಕಲ್ಲು ವಾರ್ಡ್‌ನಲ್ಲಿನ ಐದು ಹಳ್ಳಿಗಳಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್‌.ಟಿ.ಸೋಮಶೇಖರ್‌ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.

ಈ ಕಾಮಗಾರಿಯಿಂದ ದೊಡ್ಡಬಿದರಕಲ್ಲು, ಅಂದ್ರಹಳ್ಳಿ, ಹೊಸಹಳ್ಳಿ, ಕರಿಹೋಬನಹಳ್ಳಿ, ಲಿಂಗಧೀರನಹಳ್ಳಿಗಳಲ್ಲಿ ಒಳಚರಂಡಿ ಜಾಲ ನಿರ್ಮಾಣಗೊಳ್ಳಲಿದೆ.

ಶಾಸಕ ಸೋಮಶೇಖರ್‌ ಮಾತನಾಡಿ, ‘ಈ ಹಿಂದಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹೊರಹೊಲಯದ 110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆ ಕಾಮಗಾರಿಗಾಗಿ ₹ 156 ಕೋಟಿ ಬಿಡುಗಡೆ ಮಾಡಲಾಗಿತ್ತು. ನಮ್ಮ ಸತತ ಶ್ರಮದಿಂದಾಗಿ 377.8 ಕಿ.ಮೀ ಉದ್ದದ ಕೊಳವೆ ಜಾಲ ಬಹುತೇಕ ನಿರ್ಮಾಣಗೊಂಡಿದೆ. 42 ಕಿ.ಮೀ ಮಾತ್ರ ಬಾಕಿ ಇದೆ. ಆದಷ್ಟು ಬೇಗ ಹೇರೋಹಳ್ಳಿ, ಉಲ್ಲಾಳ ಹಾಗೂ ಹೆಮ್ಮಿಗೆಪುರ ವಾರ್ಡ್‌ಗಳ ಕೆಲವು ಪ್ರದೇಶಗಳಿಗೆ ನೀರು ಪೂರೈಕೆ ಆರಂಭಿಸುತ್ತೇವೆ’ ಎಂದರು.

ADVERTISEMENT

‘ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಒಳಚರಂಡಿ ಕಾಮಗಾರಿಗೆ ₹ 133 ಕೋಟಿ ಅನುದಾನ ಮೀಸಲಿಡಲಾಗಿದೆ. 333 ಕಿ.ಮೀ ಉದ್ದದ ಚರಂಡಿ ಜಾಲ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧವಾಗಿದೆ. ದೊಡ್ಡಬಿದರಕಲ್ಲಿನಲ್ಲಿಯೇ ಸುಮಾರು 70 ಕಿ.ಮೀ ಉದ್ದದ ಒಳಚರಂಡಿ ಕಾಮಗಾರಿಗೆ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

‘ನೀರು ಪೂರೈಕೆ ಕಾಮಗಾರಿಗಳಿಂದ ರಸ್ತೆಗಳು ಹಾಳಾಗಿವೆ. ಅವುಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಒಳಚರಂಡಿ ಕಾಮಗಾರಿಯನ್ನು ಎಲ್‌ ಆ್ಯಂಡ್‌ ಟಿ ಕಂಪನಿಗೆ ವಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.