ಬೆಂಗಳೂರು: ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಔರಾದ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವಾಣ್ ಅವರ ಪುತ್ರ ಪ್ರತೀಕ್ ಚವಾಣ್ ವಿರುದ್ಧ ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಇದೇ ಪ್ರಕರಣದ ಸಂಬಂಧ ಬೀದರ್ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಜುಲೈ 20ರಂದು ಪ್ರತೀಕ್ ವಿರುದ್ಧ ಪ್ರಕರಣ ದಾಖಲಾಗಿತ್ತು.
‘ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಹೋಟೆಲ್‌ವೊಂದರಲ್ಲಿ ಪ್ರತೀಕ್ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದರು. ಬೀದರ್‌ನಲ್ಲಿ ದಾಖಲಾಗದ ಪ್ರಕರಣವನ್ನು ಉಪ್ಫಾರಪೇಟೆಗೆ ವರ್ಗಾವಣೆ ಮಾಡಲಾಗಿದ್ದು, ಈ ಠಾಣೆಯಲ್ಲೂ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಮಹಾರಾಷ್ಟ್ರದ ಉದಗೀರ್ ಸಮೀಪದ ಹಣೆಗಾಂವ್ ತಾಂಡಾದ ಸಂತ್ರಸ್ತೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುವುದಕ್ಕೂ ಮುನ್ನ ಸಂತ್ರಸ್ತೆ ಹಾಗೂ ಅವರ ತಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಬೆಳಿಗ್ಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು ಎಂದು ಮೂಲಗಳು ತಿಳಿಸಿವೆ.
‘2023ರ ಡಿಸೆಂಬರ್ 25ರಂದು ಔರಾದ ತಾಲ್ಲೂಕಿನ ಘಮಸುಬಾಯಿ ಬೊಂತಿ ತಾಂಡಾದಲ್ಲಿ ಶಾಸಕ ಪ್ರಭು ಚವಾಣ್ ಅವರ ಪುತ್ರ ಪ್ರತೀಕ್ ಜತೆ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥವಾಗಿತ್ತು. ನಂತರ, ಇಬ್ಬರೂ ನಾನಾ ಕಡೆ ಸುತ್ತಾಡಿದ್ದೇವೆ. ಈ ವೇಳೆ ಪ್ರತೀಕ್ ನನ್ನ ಮೇಲೆ ಬಲವಂತದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನಂತರ ಮೋಸ ಮಾಡಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.