ADVERTISEMENT

ಲೈಂಗಿಕ ದೌರ್ಜನ್ಯ; ಕಾನ್‌ಸ್ಟೆಬಲ್‌ಗಳು ಅಮಾನತು

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 19:29 IST
Last Updated 25 ಜನವರಿ 2019, 19:29 IST

ನೆಲಮಂಗಲ: ಯುವತಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ನೆಲಮಂಗಲದ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ.

ನೆಲಮಂಗಲದ ಕುಣಿಗಲ್ ವೃತ್ತದಲ್ಲಿರುವ ಲಾಡ್ಜ್‌ವೊಂದರ ಮೇಲೆ ಜ.4ರಂದು ದಾಳಿ ನಡೆಸಿದ್ದ ಕಾನ್‌ಸ್ಟೆಬಲ್‌ಗಳು, ಯುವತಿಯರ ಜತೆಗಿದ್ದ ಇಬ್ಬರು ಹುಡುಗರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಸ್ವಲ್ಪ ಸಮಯದ ಬಳಿಕ ವಾಪಸ್ ಬಂದು ಆ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಶುಕ್ರವಾರ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೇ, ಇಲಾಖಾ ವಿಚಾರಣೆಗೂ ಆದೇಶ ಮಾಡಲಾಗಿದೆ. ‘ಸಂತ್ರಸ್ತೆಯರ ಹೇಳಿಕೆ ಪಡೆದು, ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ’ ಎಂದು ಹಿರಿಯ ಅಧಿಕಾರಿಗಳು ಇನ್‌ಸ್ಪೆಕ್ಟರ್‌ಗೆ ಸೂಚಿಸಿದ್ದಾರೆ.

ADVERTISEMENT

‘ತಮ್ಮ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದಾಗಿ ಆರೋಪಿಸಿದ್ದ ಕಾನ್‌ಸ್ಟೆಬಲ್‌ಗಳು, ಯುವತಿಯರಿಬ್ಬರನ್ನು ಕೊಠಡಿಯಲ್ಲೇ ಅಕ್ರಮವಾಗಿ ಕೂಡಿ ಹಾಕಿದರು. ನಂತರ ತಾವೂ ಒಳಗೆ ಹೋಗಿ ಒಂದು ತಾಸಿನ ಬಳಿಕ ಅವರನ್ನು ಬಿಟ್ಟು ಕಳುಹಿಸಿದರು’ ಎಂದು ಲಾಡ್ಜ್‌ ನೌಕರರು ಹೇಳಿದ್ದಾರೆ.

‘ನಾವು ಆ ಗ್ರಾಹಕರಿಂದ ಎಲ್ಲ ದಾಖಲೆಗಳನ್ನು ಪಡೆದುಕೊಂಡೇ ಕೊಠಡಿಗಳನ್ನು ಬಾಡಿಗೆಗೆ ಕೊಟ್ಟಿದ್ದೆವು. ಆದರೂ ಪೊಲೀಸರು ಸುಳ್ಳು ಆರೋಪ ಹೊರಿಸಿ ದಾಳಿ ಮಾಡಿದರು. ಹುಡುಗಿಯರನ್ನು ಕೂಡಿಹಾಕಿ ತಡವಾಗಿ ಬಿಟ್ಟದ್ದನ್ನು ಪ್ರಶ್ನಿಸಿದ್ದಕ್ಕೆ ನಮ್ಮನ್ನೇ ಬೆದರಿಸಿದರು’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

***

ಡಿವೈಎಸ್ಪಿ ದರ್ಜೆಯ ಅಧಿಕಾರಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವಿಚಾರಣಾ ವರದಿ ಬಂದ ನಂತರ ಶಿಸ್ತುಕ್ರಮ ಜರುಗಿಸಲಾಗುವುದು

-ದಯಾನಂದ್, ಐಜಿಪಿ, ಕೇಂದ್ರ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.