ADVERTISEMENT

ಚಾಕುವಿನಿಂದ ಬೆದರಿಸಿ ಲೈಂಗಿಕ ದೌರ್ಜನ್ಯ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 19:27 IST
Last Updated 7 ಫೆಬ್ರುವರಿ 2019, 19:27 IST

ಬೆಂಗಳೂರು: ಮನೆಗೆ ನುಗ್ಗಿ ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಲ್ಲದೆ, ಅವರ ಬಟ್ಟೆ ಹರಿದು ಅನುಚಿತವಾಗಿ ವರ್ತಿಸಿದ ಆರೋಪದಡಿ ಅಂಶು (21) ಎಂಬಾತನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.

2018ರ ಅಕ್ಟೋಬರ್‌ನಲ್ಲಿ ಗಾಂಜಾ ನಶೆಯಲ್ಲಿ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಅಂಶು, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಫೆ.4ರ ರಾತ್ರಿ 9.30ರ ಸುಮಾರಿಗೆ ವೈಯಾಲಿಕಾವಲ್‌ನ ಮನೆಯೊಂದಕ್ಕೆ ನುಗ್ಗಿದ್ದ ಈತ, 34 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ನಮ್ಮ ಮನೆಯನ್ನು ಭೋಗ್ಯಕ್ಕೆ ಪಡೆದಿದ್ದ ಮಹಿಳೆಯೊಬ್ಬರು, ಕೆಲ ದಿನಗಳಿಂದ ಹುಡಗನೊಬ್ಬನಿಗೆ (ಅಂಶು) ಆಶ್ರಯ ಕೊಟ್ಟಿದ್ದರು. ಆತ ಯಾರು ಎಂದು ಕೇಳಿದ್ದಕ್ಕೆ, ‘ನನ್ನ ತಮ್ಮ. ಇಷ್ಟು ದಿನ ಜೈಲಿನಲ್ಲಿ ಇದ್ದ. ಮೊನ್ನೆಯಷ್ಟೇ ಬಿಡುಗಡೆಯಾಗಿ ಬಂದಿದ್ದಾನೆ’ ಎಂದಿದ್ದರು. ಫೆ.4ರ ರಾತ್ರಿ ಮನೆಯಲ್ಲಿ ಒಬ್ಬಳೇ ಇದ್ದೆ. ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ ಆತ, ಚಾಕು ತೋರಿಸಿ ಬೆದರಿಸಿದ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದರು.

ADVERTISEMENT

‘ನಂತರ ನನ್ನ ಬಾಯಿ ಮುಚ್ಚಿದ ಆತ, ‘ಚೀರಿಕೊಂಡರೆ ಕೊಂದು ಬಿಡುತ್ತೇನೆ’ ಎಂದು ಬೆದರಿಸಿ ಚಾಕುವಿನಿಂದಲೇ ಬಟ್ಟೆ ಹರಿದ. ಕೊನೆಗೆ ಕೈ ಬಿಡಿಸಿಕೊಂಡು ನೆರವಿಗಾಗಿ ಕೂಗಿಕೊಂಡೆ. ಆಗ ಗೋಡೆಗೆ ತಲೆ ಗುದ್ದಿಸಿ, ತುಟಿ ಹಾಗೂ ಮೈ ಪರಚಿದ. ರಕ್ಷಣೆಗೆ ಬಂದ ನೆರೆಮನೆಯ ಮಹಿಳೆಗೂ ಒದ್ದು ಪರಾರಿಯಾದ’ ಎಂದು ಆರೋಪಿಸಿದ್ದರು.

ಆರೋಪಿಗೆ ಆಶ್ರಯ ಕೊಟ್ಟಿದ್ದ ಮಹಿಳೆಯಿಂದ ಆತನ ಮೊಬೈಲ್ ಸಂಖ್ಯೆ ಪಡೆದು ಶೋಧ ಪ್ರಾರಂಭಿಸಿದ ಪೊಲೀಸರು, ಕರೆ ವಿವರದ (ಸಿಡಿಆರ್) ಸುಳಿವು ಆಧರಿಸಿ ಅಂಶುವನ್ನು ಬುಧವಾರ ಮಲ್ಲೇಶ್ವರದಲ್ಲಿ ವಶಕ್ಕೆ ಪಡೆದಿದ್ದಾರೆ. ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.